

ಚಾಮರಾಜನಗರ: ಸದನದೊಳಗೆ ಕನ್ನಡಿಗರ ಪರ ಧ್ವನಿ ಎತ್ತಲು ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಕೆರೆ ಚಳವಳಿ ರಮೇಶಗೌಡ ತಿಳಿಸಿದರು.
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಜನಪರ ವೇದಿಕೆಯ 10ನೇ ವರ್ಷದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ, ನಿವೃತ್ತ ಸೈನಿಕರಿಗೆ ಗೌರವ ಸಮರ್ಪಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಮಾತ್ರ ಸದನದೊಳಗೆ ಕನ್ನಡಿಗರ ಪರ ಹೋರಾಟ ಮಾಡುವ ಮೂಲಕ ಕನ್ನಡಪ್ರೇಮ ಮೆರೆದರು. ಪ್ರಸ್ತುತ ದಿನಗಳಲ್ಲಿ ಕನ್ನಡಕ್ಕೆ ಧಕ್ಕೆ ಉಂಟಾದರೆ ಸದನದೊಳಗೆ ಯಾವ ಶಾಸಕರು ಪ್ರಶ್ನೆ ಮಾಡುತ್ತಿಲ್ಲ. ಧ್ವನಿ ಎತ್ತಲು ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ನಮ್ಮ ವೇದಿಕೆಯ ವತಿಯಿಂದ ಕಾವೇರಿ, ಮೇಕೆದಾಟು, ಕಳಸಾಬಂಡೂರಿ, ಮಹಾದಾಯಿ ಸೇರಿದಂತೆ 8 ಅಂಶಗಳನ್ನಿಟ್ಟುಕೊಂಡು ಹೋರಾಟ ಮಾಡಿಕೊಂಡು ಬರಲಾಗಿದೆ. ನಮ್ಮ ಹೋರಾಟಕ್ಕೆ ಚಾಮರಾಜನಗರ ಜಿಲ್ಲಾ ಘಟಕ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತು ಶಕ್ತಿ ತುಂಬುವ ಕೆಲಸ ಮಾಡಿದೆ. ನಮ್ಮ ಹೋರಾಟ ನಾಡಿನಪರವಾಗಿದ್ದು, ನಾಡಿ-ನುಡಿಗಾಗಿ, ಜಲಕ್ಕಾಗಿ ನಿರಂತರ ಹೋರಾಟ ಮಾಡಲಾಗುವುದು ಎಂದರು.
ಮುಖಂಡ ವೆಂಕಟರಮಣಸ್ವಾಮಿ( ಪಾಪು) ,ಮಾತನಾಡಿ, ಕನ್ನಡ ಚಳವಳಿ ಎಂದರೆ ವಾಟಾಳ್ ನಾಗರಾಜ್ ಎನ್ನುವ ಕಾಲವೊಂದಿತ್ತು. ಹಳ್ಳಿಗಾಡಿನ ಜನರು ಇರುವ ತನಕ ಕನ್ನಡ ನಶಿಸುವುದಿಲ್ಲ. ಗ್ರಾಮೀಣ ಭಾಗದ ರೈತಾಪಿ ಜನರಿಂದ ಕನ್ನಡ ಎಂದೆಂದಿಗೂ ಜೀವಂತವಾಗಿರುತ್ತದೆ ಎಂದು ಹೇಳಿದರು.
ವೇದಿಕೆ ಗೌರವ ಅಧ್ಯಕ್ಷ ಪಿ.ಲಿಂಗರಾಜು, ಜಿಲ್ಲಾಧ್ಯಕ್ಷ ಮಲ್ಲು ಯರಗಂಬಳ್ಳಿ,,ಕರ್ನಾಟಕ ಸೇನಾ ಪಡೆ ಅಧ್ತಕ್ಷ ಚಾ.ರಂ.ಶ್ರೀನಿವಾಸಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ಯೋಗೇಶ್ ಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಾಣಿಲಿಂಗರಾಜು, ಸತೀಶ್, ಎಚ್.ಎಂ.ಬಸವಣ್ಣ, ನಗರಸಭಾ ಮಾಜಿ ಸದಸ್ಯ ಸೈಯದ್ ಅತೀಕ್, ಪುಟ್ಟಸ್ವಾಮಿ, ಅಶೋಕ್, ಸೋಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಶೆಟ್ಟಿ, ರುದ್ರಯ್ಯ, ಕುಮಾರ್, ನಾರಾಯಣ, ಜಿಲ್ಲಾ ಉಪಾಧ್ಯಕ್ಷ ನಾಗರಾಜು, ಅಶೋಕ, ಸೋಮಣ್ಣ, ಮೋಹನ್ ಕುಮಾರ್ ಹಾಜರಿದ್ದರು.