ಸಂಚಾರಿ ರಕ್ತ ಸಂಗ್ರಹಣೆ ವಾಹನ ಹಸ್ತಾಂತರ

19raju4
Published on

ಚಾಮರಾಜನಗರ: ಐಸಿಐಸಿಐ ಬ್ಯಾಂಕು ಸಿಎಸ್‌ಆರ್ ಯೋಜನೆಯಡಿ ನೀಡಿರುವ 37 ಲಕ್ಷ ರೂ. ವೆಚ್ಚದ ಸಂಚಾರಿ ರಕ್ತ ಸಂಗ್ರಹಣೆ ವಾಹನವನ್ನು ಚಾಮರಾಜನಗರ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೋಮವಾರ ಆಸ್ಪತ್ರೆಗೆ ಹಸ್ತಾಂತರಿಸಿದರು.

ಚಾಮರಾಜನಗರ ವೈದ್ಯಕೀಯ ಕಾಲೇಜಿನ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಐಸಿಐಸಿಐ ಫೌಂಡೇಶನ್ ವತಿಯಿಂದ ನೀಡಿರುವ ಅತ್ಯಾಧುನಿಕ ಮೊಬೈಲ್ ರಕ್ತ ಸಂಗ್ರಹಣೆ ವಾಹನದ ಕೀ ಯನ್ನು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ವೈದ್ಯಕೀಯ ಕಾಲೇಜಿಗೆ ನೀಡುವ ಮೂಲಕ ವಾಹನ ಹಸ್ತಾಂತರಿಸಿದರು.
ರಕ್ತದಾನಿಗಳ ಮನೆ ಬಾಗಿಲಿಗೆ ತೆರಳಿ ರಕ್ತ ಸಂಗ್ರಹಿಸಿ ಬಳಿಕ ಅದನ್ನು ವೈಜ್ಞಾನಿಕವಾಗಿ ಇಡಲು ಅಗತ್ಯವಿರುವ ಅತ್ಯಾಧುನಿಕ ಸಾಧನ, ಸಲಕರಣೆಗಳನ್ನು ವಾಹನ ಒಳಗೊಂಡಿದೆ. ರೆಫ್ರಿಜರೇಟರ್, ಹಾಸಿಗೆ, ರಕ್ತದಾನಿಗಳ ವಿಶ್ರಾಂತಿಗೆ ಆಸನದ ವ್ಯವಸ್ಥೆ, ಹವಾ ನಿಯಂತ್ರಣ, ಯುಪಿಎಸ್ ಸೇರಿದಂತೆ ರಕ್ತ ಸಂಗ್ರಹಣೆಗೆ ಅವಶ್ಯವಿರುವ ಎಲ್ಲ ಸೌಲಭ್ಯವನ್ನು ವಾಹನದಲ್ಲಿ ಅಳವಡಿಸಲಾಗಿದೆ.

ವಾಹನ ಹಸ್ತಾಂತರಿಸಿದ ಬಳಿಕ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ರಕ್ತ ಸಂಗ್ರಹಣೆ ಹೆಚ್ಚಾಗಬೇಕಿದೆ. ದಾನಿಗಳು ರಕ್ತ ನೀಡಲು ಆಸ್ಪತ್ರೆ, ರಕ್ತದಾನ ಶಿಬಿರಗಳಿಗೆ ಬರಬೇಕಿತ್ತು. ಇದೀಗ ಮೊಬೈಲ್ ವಾಹನ ಇರುವುದರಿಂದ ದಾನಿಗಳ ಬಳಿಯೇ ತೆರಳಿ ರಕ್ತ ಸಂಗ್ರಹ ಮಾಡಬಹುದಾಗಿದೆ. ವಾಹನದಿಂದ ಜಿಲ್ಲೆಗೆ ತುಂಬಾ ಅನುಕೂಲವಾಗಲಿದೆ ಎಂದರು.

ಅರಣ್ಯ ಪ್ರದೇಶಗಳನ್ನು ಹೆಚ್ಚು ಹೊಂದಿರುವ ಜಿಲ್ಲೆಗೆ ಮೊಬೈಲ್ ರಕ್ತ ಸಂಗ್ರಹ ವಾಹನ ಅಗತ್ಯವಿತ್ತು. ಸಂಚಾರಿ ರಕ್ತ ಸಂಗ್ರಹ ವಾಹನ ಜಿಲ್ಲೆಯ ಎಲ್ಲಡೆ ಸಂಚರಿಸಿ ರಕ್ತ ದಾನಿಗಳಿಂದ ರಕ್ತ ಸಂಗ್ರಹಿಸಲು ಅನುಕೂಲವಾಗಲಿದೆ. ಐಸಿಐಸಿಐ ಬ್ಯಾಂಕ್‌ನ ಸಿಎಸ್‌ಆರ್ ಯೋಜನೆಯಡಿ ವಾಹನ ನೀಡಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯ ವೈದ್ಯಕೀಯ ಸೇವೆಗೆ ನೆರವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ನೂತನ ರಕ್ತ ಸಂಗ್ರಹಣೆ ವಾಹನದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಗೌಡ ಪ್ರಮಾಣ ಪತ್ರ ನೀಡಿದರು.
ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್ ಡಾ.ಜಿ.ಎಂ.ಸಂಜೀವ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಸಹಾಯಕ ಪ್ರಾಧ್ಯಾಪಕಿ ಡಾ.ಗಾಯತ್ರಿ, ಪೆಥಾಲಜಿ ಮುಖ್ಯಸ್ಥ ಡಾ.ವಾಣಿಶ್ರೀ, ರಕ್ತನಿಧಿ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ದಿವ್ಯಾ, ಐಸಿಐಸಿಐ ಫೌಂಡೇಶನ್‌ನ ಪ್ರಾಜೆಕ್ಟ್ ಮ್ಯಾನೇಜರ್ ಎನ್.ಮಹದೇವಸ್ವಾಮಿ, ಐಸಿಐಸಿಐ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥ ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net