

ಚಾಮರಾಜನಗರ: ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರ 67ನೇ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಭಾರತೀಯ ಬೌದ್ದ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ಬುಧವಾರ ಮೊಂಬತ್ತಿ ಮೆರವಣಿಗೆ ಹಾಗೂ ಅಂಬೇಡ್ಕರ್ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ನಗರದ ಸಾರನಾಥ ಬುದ್ದವಿಹಾರದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿ, ಬುದ್ದನಗರ, ಹೌಸಿಂಗ್ ಬೋರ್ಡ್ ಯಜಮಾನರು, ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ, ನೌಕರರ ಸಮನ್ವಯ ಸಮಿತಿ, ಮಾತಾ ರಮಾಬಾಯಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುದ್ದ, ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಷಾರ್ಚನೆ ಮಾಡಿ, ಸಾಮೂಹಿಕ ಬುದ್ದವಂದನೆ ಸಲ್ಲಿಸಿ ನಂತರ ಮೊಂಬತ್ತಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಸಾರನಾಥಬುದ್ಧ ವಿಹಾರದಿಂದ ಹೊರಟ ಮೆರವಣಿಗೆ ದೀಪಾಂಕರ ಬೌದ್ದವಿಹಾರ, ನ್ಯಾಯಾಲಯರಸ್ತೆ, ಡಿವೈಎಸ್‌ಪಿ ಕಚೇರಿ ರಸ್ತೆ, ಜೆಎಸ್‌ಎಸ್ ಆಸ್ಪತ್ರೆರಸ್ತೆ ಮೂಲಕ ಹೌಸಿಂಗ್ ಬೋರ್ಡ್, ಅಂಬೇಡ್ಕರ್ ಉದ್ಯಾನವನ, ಬುದ್ದನಗರದಲ್ಲಿ ಸಮಾವೇಶಗೊಂಡ ನಂತರ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣಕ್ಕೆ ಸಂಬಂಧಿಸಿದ ಮೂಲ ಸಾಕ್ಷ್ಯಚಿತ್ರಗಳು, ಸ್ಮಾರಕಗಳ ಪ್ರದರ್ಶನ ಮಾಡಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ಬೌದ್ದ ಮಹಾಸಭಾ ಜಿಲ್ಲಾ ಶಾಖೆ, ನಾಗರೀಕ ಹಿತರಕ್ಷಣಾ ಸಮಿತಿ, ಬುದ್ದನಗರ, ಹೌಸಿಂಗ್ ಬೋರ್ಡ್, ಕರಿನಂಜನಪುರದ ಯಜಮಾನರು, ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ,ನೌಕರರ ಸಮನ್ವಯ ಸಮಿತಿ, ಮಾತಾ ರಮಾಬಾಯಿ ಫೌಂಡೇಶನ್ ಪದಾಧಿಕಾರಿಗಳು, ಅಂಬೇಡ್ಕರ್‌ರವರ ಅಭಿಮಾನಿಗಳು, ಬೌದ್ದ ಉಪಾಸಕರು ಭಾಗವಹಿಸಿದ್ದರು.