

ಚಾಮರಾಜನಗರ: ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಸ್ವಚ್ಛತೆ ಕಾಪಾಡುವ ಸಂಬಂಧ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದರು, ಸೂಕ್ತ ಸಮಯಕ್ಕೆ ಕಸ ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.
ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ ಹಾಗೂ ಹನೂರು ಮತ್ತು ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆಗಳಲ್ಲಿ ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡದೇ ರಾಶಿ ರಾಶಿ ಕಸ ಬಿದ್ದಿರುವುದು ಕಂಡುಬರುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳು ತಲೆದೋರುತ್ತಿದ್ದು, ಹಲವು ಕಡೆಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಸಾಕಷ್ಟು ಕಡೆಗಳಲ್ಲಿ ಕಸವಿಲೇವಾರಿ ಮಾಡದೇ ಕಸವೆಲ್ಲವೂ ಚರಂಡಿ ಸೇರುತ್ತಿದ್ದು, ಸೊಳ್ಳೆಗಳು ಹೆಚ್ಚಾಗಿ ಅನೇಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಅದಲ್ಲದೇ ಸೂಕ್ತ ರೀತಿಯಲ್ಲಿ ಚರಂಡಿ ಹೂಳೆತ್ತದೆ ಮತ್ತಷ್ಟು ಸಮಸ್ಯೆಗಳು ತಲೆದೋರುತ್ತಿದೆ.
ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಸಾಕಷ್ಟು ಕಸಗಳನ್ನು ಹಾಕುತ್ತಿದ್ದಾರೆ. ಇಂತಹ ಜಾಗಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೇ ರಸ್ತೆಯ ಬದಿಗಳಲ್ಲಿ ಕಸ ಹರಡಿರುವುದು ಕಂಡುಬರುತ್ತಿದೆ. ಇದರಿಂದಾಗಿ ಸಾಕಷ್ಟು ರಸ್ತೆಗಳಲ್ಲಿ ದುರ್ವಾಸನೆ ಉಂಟಾಗುತ್ತಿದೆ. ಅನೇಕ ಸಣ್ಣ ಪುಟ್ಟ ವ್ಯಾಪಾರಿಗಳು, ತಳ್ಳು ಗಾಡಿಗಳು, ಹೋಟೆಲ್‌ಗಳು ಸಮರ್ಪಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಬಿಸಾಡುವುದು ಕೂಡ ಕಸ ವಿಲೇವಾರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸಾರ್ವಜನಿಕರು ಅಧಿಕಾರಿಗಳ ಜತೆಗೆ ಕಸ ವಿಲೇವಾರಿ ಸಮಸ್ಯೆಗಳನ್ನು ಮುಂದಿಟ್ಟ ಸಂದರ್ಭದಲ್ಲಿ ಪೌರಕಾರ್ಮಿಕರ ಕೊರತೆಯ ಕಾರಣ ನೀಡುತ್ತಾರೆ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರೆಗೆ ಹೆಚ್ಚಿನ ಹೊರೆ ಇದ್ದು, ಪೌರಕಾರ್ಮಿಕರ ಕೊರತೆ ಕಸ ವಿಲೇವಾರಿಗೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಲ್ಲಲ್ಲಿ ಕಸದ ರಾಶಿ
ಹನೂರಿನ ಕೆಲವು ಬಡಾವಣೆಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಇದರಿಂದ ಅಲ್ಲಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಹಸು ಹಾಗೂ ನಾಯಿಗಳು ಕಸವನ್ನು ಚೆಲ್ಲಾಂಪಿಲ್ಲಿ ಮಾಡುತ್ತಿವೆ. ಇದು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಸ ಹೆಚ್ಚು ಸಂಗ್ರಹವಾಗುವ ಕಡೆ ಕಸದ ತೊಟ್ಟಿ ಇಡಬೇಕು. ಜತೆಗೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವುದರ ಮೂಲಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
ರೇಖಾ, ಗೃಹಿಣಿ, ಹನೂರು.
ಪೌರಕಾರ್ಮಿಕರ ಕೊರತೆ
ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರ ಕೊರತೆ ಇದೆ. ಆಗಾಗಿ ಕಸ ವಿಲೇವಾರಿ ತೊಡುಕಾಗಿ ಪರಿಣಮಿಸಿದೆ. ಆದಾಗ್ಯೂ ಕಳೆದ ಒಂದು ವಾರದಿಂದ ಕೊಳ್ಳೇಗಾಲದಿಂದ 7 ಪೌರ ಕಾರ್ಮಿಕರನ್ನು ತಾತ್ಕಲಿಕವಾಗಿ ನಿಯೋಜಿಸಿಕೊಂಡು ಕಸ ವಿಲೇವಾರಿ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪೌರ ಕಾರ್ಮಿಕರ ಕೊರತೆ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅಗತ್ಯ ಭರವಸೆ ನೀಡಿದ್ದಾರೆ.
ಮೂರ್ತಿ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಹನೂರು
ವಿಲೇವಾರಿ ಘಟಕ ಸ್ಥಾಪನೆ
ಪಟ್ಟಣದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಕಾಮಗಾರಿ ಕೆಲಸವು ನಡೆಯುತ್ತಿದ್ದು, ಈಗಾಗಲೇ ಕಾಂಪೌಂಡನ್ನು ನಿರ್ಮಿಸಲಾಗಿದೆ. ಆದಷ್ಟು ಬೇಗ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಿ ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಲಾಗುವುದು.
ಮಹೇಶ್ ಕುಮಾರ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ, ಯಳಂದೂರು
ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ
ಯಳಂದೂರು ಪಟ್ಟಣದಲ್ಲಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ, ಇದರಿಂದ ಸಾಕಷ್ಟು ಕಸ ಚರಂಡಿ ಪಾಲಾಗುತ್ತಿದೆ. ಹಲವು ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಕಸ ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಹೆಚ್ಚಿನ ಕಸ ಸಂಗ್ರಹವಾಗುತ್ತಲೇ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಇದರಿಂದ ಸಾರ್ವಜನಿಕರು ಖಾಯಿಲೆಗೆ ತುತ್ತಾಗುತ್ತಾರೆ. ಆದ್ದರಿಂದ ಸಮರ್ಪಕವಾಗಿ ಕಸವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕಾಗಿದೆ.
ದಿಶಾ, ನಿವಾಸಿ, ಯಳಂದೂರು
ಅಧಿಕಾರಿಗಳ ನಿರ್ಲಕ್ಷ್ಯ
ಪಟ್ಟಣದ ಜನತಾ ಕಾಲೋನಿ ಹಾಗೂ ನಾನಾ ಬಡಾವಣೆಗಳಲ್ಲಿ ಸಮರ್ಪಕವಾಗಿ ಕಸವನ್ನು ತೆರವು ಮಾಡುತ್ತಿಲ್ಲ. ಅಲ್ಲದೆ ವರ್ಷವಾದರೂ ಚರಂಡಿಗಳಲ್ಲಿ ಹೂಳೆತ್ತುತ್ತಿಲ್ಲ. ಇದರಿಂದಾಗಿ ಅಶುಚಿತ್ವ ಹಾಗೂ ಅನೈರ್ಮಲ್ಯ ತಾಂಡವವಾಡುತ್ತಿದೆ. ಸಾಕಷ್ಟು ರೋಗ ರುಜಿನಗಳು ಉತ್ಪತ್ತಿಯಾಗಲು ಕಾರಣವಾಗುತ್ತಿದೆ. ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬರುತ್ತಿದೆ.
ಮಹದೇವನಾಯ್ಕ, ಜನತಾ ಕಾಲೋನಿ, ಗುಂಡ್ಲುಪೇಟೆ
ಕ್ರಮವಹಿಸಲಾಗುವುದು
ಮುಖ್ಯ ರಸ್ತೆ ಹಾಗೂ ಹೆಚ್ಚಿನ ಬಡಾವಣೆಗಳಲ್ಲಿ ಪ್ರತಿ ದಿನವೂ ಕಸ ತೆರವು ಮಾಡಲಾಗುತ್ತಿದೆ. ಕಾಲಕಾಲಕ್ಕೆ ಚರಂಡಿಗಳ ಹೂಳೆತ್ತಿಸಲು ಕ್ರಮ ಕೈಗೊಳ್ಳಲಾಗುವುದು.
ವಸಂತಕುಮಾರಿ, ಮುಖ್ಯಾಧಿಕಾರಿ, ಪುರಸಭೆ, ಗುಂಡ್ಲುಪೇಟೆ
ಖಾಲಿ ನಿವೇಶನಗಳಲ್ಲಿ ಕಸ
ಕೊಳ್ಳೇಗಾಲದ ಹಲವು ವಾರ್ಡ್‌ಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ತಳ್ಳು ಗಾಡಿಗಳ ವ್ಯಾಪಾರಿಗಳು ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಾರೆ. ಹಲವು ಕಡೆಗಳಲ್ಲಿ ಇರುವ ಖಾಲಿ ನಿವೇಶನಗಳು ತ್ಯಾಜ್ಯಗಳನ್ನು ಸುರಿಯುವ ಘಟಕವಾಗಿದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕಿದೆ.
ಪ್ರಮೋದ್, ನಿವಾಸಿ, ಕೊಳ್ಳೇಗಾಲ
ತೆರವಿಗೆ ಮುಂದಾಗುತ್ತೇವೆ
ಪಟ್ಟಣದಲ್ಲಿ ಸಮರ್ಪವಾಗಿ ಕಸ ವಿಲೇವಾರಿ ಪ್ರಕ್ರಿಯೆ ನಡೆಸಲು ಕ್ರಮವಹಿಸುತ್ತೇವೆ. ಖಾಲಿ ನಿವೇಶನದಲ್ಲಿ ತ್ಯಾಜ್ಯ ಸುರಿಯುವ ಬಗ್ಗೆ ಗಮನಹರಿಸಲಾಗಿವುದು. ತೆರವಿಗೂ ಮುಂದಾಗುತ್ತೇವೆ. ಬಿ.ಆರ್. ಮಹೇಶ್, ಪ್ರಭಾರ ಪೌರಯುಕ್ತ, ಕೊಳ್ಳೇಗಾಲ
ಆರೋಗ್ಯ ನಿರೀಕ್ಷಕರ ಅಸಡ್ಡೆ ಮನೋಭಾವ
ನಗರಸಭೆ ವ್ಯಾಪ್ತಿಯಲ್ಲಿರುವ ಪ್ರಮುಖ ವಾರ್ಡ್‌ಗಳಲ್ಲೇ ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡುತ್ತಿಲ್ಲ. ಆರೋಗ್ಯ ನಿರೀಕ್ಷಕರ ಅಸಡ್ಡೆ ಮನೋಭಾವದಿಂದ ಅಲ್ಲಲ್ಲಿ ಕಸ ಸಂಗ್ರಹವಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಪೌರಕಾರ್ಮಿಕರ ಕೊರತೆ ಇದೆ ಎಂದು ಅವರ ಮೇಲೆ ಗೂಬೆ ಕೂರಿಸುತ್ತಾರೆ. ಈಗಲಾದರೂ ನಗರಸಭಾ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತರೀತಿಯಲ್ಲಿ ಕಸವನ್ನು ವಿಲೇವಾರಿ ಮಾಡುವಂತೆ ಕ್ರಮವಹಿಸಬೇಕು.
ಪರಶಿವಮೂರ್ತಿ, 15ನೇ ವಾರ್ಡ್, ಚಾಮರಾಜನಗರ
3 ಜೋನ್‌ಗಳಾಗಿ ವಿಂಗಡನೆ
ನಗರದಲ್ಲಿ ಇತ್ತಿಚೆಗೆ ಸಾಕಷ್ಟು ಸಕರ್ಅರಿ ಕಾರ್ಯಕ್ರಮಗಳು ನಡೆದವು, ಇಂತಹ ಸಂದರ್ಭದಲ್ಲಿ ಹೆಚ್ಚಿನ ಕಸ ಸಂಗ್ರಹವಾಗುತ್ತದೆ. ಅಲ್ಲಿಗೆ ಕಸ ವಿಲೇವಾರಿ ವಾಹನಗಳನ್ನು ಹಾಕಬೇಕಾಗುತ್ತದೆ. ಆಗ ವಾರ್ಡ್‌ಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ. ಅದನ್ನು ಹೊರತುಪಡಿಸಿ ನಗರಸಭೆ ವ್ಯಾಪ್ತಿಯಲ್ಲಿರುವ 31 ವಾರ್ಡ್‌ಗಳನ್ನು 3 ಜೋನ್‌ಗಳಾಗಿ ವಿಂಗಡನೆ ಮಾಡಿ, ಒಬ್ಬರು ಆರೋಗ್ಯ ನಿರೀಕ್ಷಕರನ್ನು ನೇಮಕ ಮಾಡಲಾಗಿದೆ. ಕೆಲವು ಸಮಯಗಳಲ್ಲಿ ವಾಹನಗಳು ರಿಪೇರಿಯಿಂದಾಗಿ ಕಸ ವಿಲೇವಾರಿ ನಿಧಾನವಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮವಹಿಸಲಾಗುತ್ತದೆ.
ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ