ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿ

02chn11
Published on

ಚಾಮರಾಜನಗರ: ಸರ್ಕಾರಿ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಆದಷ್ಟು ಬೇಗ ಕ್ರಮವಹಿಸಲಾಗುವುದು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಭರವಸೆ ನೀಡಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ಕೇಂದ್ರಕ್ಕೆ 2013 ರಲ್ಲಿ ಮಹಿಳಾ ಕಾಲೇಜು ಮಂಜೂರು ಆಯಿತು. ಪೇಟೆ ಪ್ರೈಮರಿ ಶಾಲೆಯಲ್ಲಿ ಮೊದಲಿಗೆ ಪ್ರಾರಂಭಿಸಿದಾಗ 33 ವಿದ್ಯಾರ್ಥಿಗಳು ಇದ್ದರು. ಈಗ 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂಲಸೌಕರ್ಯ ಕಲ್ಪಿಸಲು ಸ್ವಂತ ಕಟ್ಟಡ ಬೇಕಾಗುತ್ತದೆ, ಆಗಾಗಿ ಆದಷ್ಟು ಬೇಗ ಗುದ್ದಲಿಪೂಜೆ ಮಾಡಿ ಪ್ರಾರಂಭ ಮಾಡುತ್ತೇನೆ. ಸುಮಾರು 10-15 ಕೋಟಿ ಅನುದಾನ ಬೇಕಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಯಲ್ಲಿ 1 ನೇ ತರಗತಿಯಿಂದಲೇ ಪ್ರತಿಭಾ ಕಾರಂಜಿಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಕಲೆಯನ್ನು ಓರೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಕೇವಲ ಪುಸ್ತಕಗಳಿಂದ ಮಾತ್ರ ಎಲ್ಲವೂ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಜತೆಗೆ ಉತ್ತಮ ಸ್ನೇಹ ಬಾಂಧವ್ಯ ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು.

ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ವಿಜಯಕುಮಾರಿ ಎಸ್.ಕರಿಕಲ್ ಮಾತನಾಡಿ, ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ಉನ್ನತ ವ್ಯಾಸಂಗ ಪಡೆದು ತಮ್ಮ ಜ್ಞಾನದ ಜ್ಯೋತಿಯನ್ನು ಇತರರಿಗೂ ಪಸರಿಸಬೇಕು. ತೊಟ್ಟಿಲು ತೂಗುವ ಕೈ ಜಗತ್ತನ್ನು ತೂಗಬಲ್ಲದು ಎಂಬುದನ್ನು ತಿಳಿದುಕೊಳ್ಳಬೇಕು. ಮಹಿಳೆಯರಿಗೆ ಅವಕಾಶಗಳು ಸಿಕ್ಕರೇ ಸಮರ್ಥವಾಗಿ ಬಳಸಿಕೊಂಡು ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.

ಡಾ.ಶಾಂತರಾಜು ಮಾತನಾಡಿ, ಸುಮಾರು 10 ವರ್ಷಗಳನ್ನು ಪೂರೈಸಿ ಮೊಟ್ಟಮೊದಲ ಬಾರಿಗೆ ಬಿ ಶ್ರೇಣಿ ನ್ಯಾಕ್ ಮಾನ್ಯತೆ ಪಡೆದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಹಕಾರಿಯಾಗಿದೆ. ಸುಮಾರು 500 ವಿದ್ಯಾರ್ಥಿಗಳು ಇದ್ದಾರೆ. 2013 ರಲ್ಲಿ 2 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ. ವಿದ್ಯಾರ್ಥಿಗಳಿಗೆ ವಸತಿ ನಿಲಯ, ಸೂಕ್ತ ಬಸ್ ವ್ಯವಸ್ಥೆ ಮಾಡಿಕೊಟ್ಟರೆ ಮತ್ತಷ್ಟು ವಿದ್ಯಾರ್ಥಿನಿಯರು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಎಂ.ಆರ್.ಸುಮತಿ, ಐಕ್ಯೂಎಸಿ ಸಮಿತಿ ಸಂಚಾಲಕ ಟಿ.ಬಾಲಸುಬ್ರಹ್ಮಣ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ಎಂ.ಸಿ.ಪ್ರಭಾವತಿ, ಕ್ರೀಡಾ ಸಮಿತಿ ಸಂಚಾಲಕ ಡಾ.ಶಾಂತರಾಜು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಡಾ.ಎಚ್.ಎಸ್.ರುಕ್ಮಿಣಿ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕಿ ಎಸ್.ಆರ್.ದೀಪಾ, ರೆಡ್ ಕ್ರಾಸ್ ಸಮಿತಿ ಸಂಚಾಲಕ ಸಿದ್ದರಾಜು ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net