ಆಕ್ಸಿಜನ್ ಸಂತ್ರಸ್ತರ ಉದ್ಯೋಗದ ಕನಸು ಜೀವಂತ

01chn11
Published on

ಚಾಮರಾಜನಗರ: ಜಿಲ್ಲೆಯ ಆಕ್ಸಿಜನ್ ದುರಂತದಲ್ಲಿ ಮಡಿದ ಸೋಂಕಿತರ ಕುಟುಂಬಸ್ಥರಿಗೆ ಉದ್ಯೋಗ ನೀಡುವ ಸರ್ಕಾರದ ಭರವಸೆ ಇಂದಿಗೂ ಜೀವಂತವಾಗಿದ್ದು, ಸುಮಾರು 32 ಜನರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಕ್ಸಿಜನ್ ಸಂತ್ರಸ್ತ ಕುಟುಂಬಸ್ಥರು ಹಾಗೂ ಎಸ್ಡಿಪಿಐ ಮುಖಂಡರು ಶುಕ್ರವಾರ ಮನವಿ ಸಲ್ಲಿಸುವ ವೇಳೆ ಮಾತನಾಡಿದ ಅವರು, ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಉದ್ಯೋಗ ಕಲ್ಪಸುವ ನಿಟ್ಟಿನಲ್ಲಿ ಸುಮಾರು 32 ಜನರ ಹೆಸರನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಈ ಮೊದಲು 24 ಜನರನ್ನು ಪಟ್ಟಿಮಾಡಲಾಗಿತ್ತು, ಈಗ ಒಟ್ಟು 32 ಜನರ ಹೆಸರನ್ನು ಕಳುಹಿಸಿಕೊಡಲಾಗಿದೆ. ಚಾಮರಾಜನಗರ ವೈದ್ಯಕೀಯ ಕಾಲೇಜು, ಆರೋಗ್ಯ ಇಲಾಖೆ ಅಥವಾ ಇನ್ನಿತರೆ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಉದ್ಯೋಗವನ್ನು ಕಲ್ಪಿಸಿಕೊಡುವಂತೆ ಕ್ರಮವಹಿಸಲಾಗಿದೆ ಎಂದು ಸಂತ್ರಸ್ತ ಕುಟುಂಬಗಳಿಗೆ ಭರವಸೆ ನೀಡಿದರು.

ನಮ್ಮ ಕೆಲಸವನ್ನು ಮುಗಿಸಿದ್ದೇವೆ, ಸರ್ಕಾರದ ಮಟ್ಟದಲ್ಲಿ ಇದು ಆಗಬೇಕಿದೆ. ಇನ್ನೂ 4 ಜನ ಸಂತ್ರಸ್ತರು ಪಟ್ಟಿಯಲ್ಲಿ ಇರಬೇಕು ಎಂದು ಹೇಳುತ್ತಿದ್ದೀರಿ, ಯಾರಾದರೂ ಸಂತ್ರಸ್ತರಿಗೆ ಅನ್ಯಾಯವಾಗಿದ್ದರೆ ಅಂತವರ ಹೆಸರು ಮತ್ತು ದಾಖಲೆಯನ್ನು ಪ್ರತ್ಯೇಕವಾಗಿ ಸಲ್ಲಿಸಿದರೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಆದಷ್ಟು ಬೇಗ ಸಂತ್ರಸ್ತ ಕುಟುಂಬಸ್ಥರಿಗೆ ಉದ್ಯೋಗ ದೊರಕಿಸಿಕೊಡು ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮ್ಮದ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಮಯದಲ್ಲಿ, ಆಕ್ಸಿಜನ್ ದುರಂತವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೃತ ಕುಟುಂಬಸ್ಥರಿಗೆ ಉದ್ಯೋಗ ನೀಡುವಂತೆ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಲ್ಲಿ ಒಬ್ಬರಿಗೆ ಆದಷ್ಟು ಬೇಗ ಸರ್ಕಾರಿ ಉದ್ಯೋಗ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ನಗರಸಭಾ ಸದಸ್ಯ ಎಂ.ಮಹೇಶ್, ಕಲೀಲ್ ಉಲ್ಲಾ, ಮೊಹಮದ್ ಅಮೀಕ್, ಸಂತ್ರಸ್ತ ಕುಟುಂಬದ ಎಂ.ಪುಷ್ಪ, ಸುನೀತಾ, ಸವಿತಾ, ಎನ್.ಜ್ಯೋತಿ, ಸಿದ್ದರಾಜಮ್ಮ, ಸುಶೀಲ, ಶಿವಣ್ಣ ಶೆಟ್ಟಿ, ನಾಗರತ್ನ, ಮರಿಸ್ವಾಮಿ, ಎಂ.ಮನು, ಸೌಮ್ಯ, ರಘು ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net