

ಚಾಮರಾಜನಗರ: ಕಾಂತರಾಜ್ ವರದಿ ಅಂಗೀಕಾರಕ್ಕೆ ಒತ್ತಾಯಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಡಿ. 5 ರಂದು ಮಂಗಳವಾರ ನಗರದಲ್ಲಿ ಹಕ್ಕೊತ್ತಾಯ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಮಂಗಲ ಶಿವಕುಮಾರ್ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಕಾಂತರಾಜ್ ವರದಿ ಅಂಗೀಕಾರಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಯಿತು.
ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಬೆಳಿಗ್ಗೆ 10 : 30ಕ್ಕೆ ಸಮಾವೇಶಗೊಂಡು ಅಲ್ಲಿಂದ ಶ್ರೀ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಈ ಹಕ್ಕೊತ್ತಾಯ ರ‌್ಯಾಲಿಗೆ ಹಿಂದುಳಿದ ವರ್ಗಗಳ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮುಖಂಡ ವೆಂಕಟಸ್ವಾಮಿ, ಜೆ.ಶಿವಮೂರ್ತಿ, ನಟರಾಜೇಗೌಡರು, ನಿವೃತ್ತ ಅಧಿಕಾರಿ ರಾಮಶೆಟ್ಟಿ, ವಕೀಲ ರಂಗಸ್ವಾಮಿ, ದುಂಡುಮಹದೇವ, ಬದನಗುಪ್ಪೆ ಬಸವಣ್ಣ, ಭೀಮನಬೀಡು ಅರಸಶೆಟ್ಟಿ, ನಂದೀಶ್ ವಿಶ್ವಕರ್ಮ, ಬೂದಿತಿಟ್ಟು ಲಕ್ಷ್ಮಣ್, ಹೊನ್ನೂರು ಪುಟ್ಟಸ್ವಾಮಿ, ಯಳಂದೂರು ನಾಗರಾಜು, ಕೆಲ್ಲಂಬಳ್ಳಿ ಮಹದೇವ, ಬೇಡರಪುರ ಮಲ್ಲು, ಶಿವಮಲ್ಲು, ಪ್ರಕಾಶಶೆಟ್ಟಿ, ಹಂಡ್ರಕಳ್ಳಿ ಶಂಭು, ಬೇಗೂರು ಅಣ್ಣಯ್ಯ, ಬನ್ನಿತಾಳಪುರ ಮಹೇಶ್, ಅರುಣ್‌ಕುಮಾರ್, ಆಲೂರುನಾಗಣ್ಣ ಇತರರು ಭಾಗವಹಿಸಿದ್ದರು.