

ಚಾಮರಾಜನಗರ: ನಿತ್ಯ ಜೀವನದಲ್ಲಿ ಪ್ರತಿಯೊಬ್ಬರಿಗೂ ಆಹಾರದ ಅರಿವು ಅತ್ಯಗತ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಅಭಿಪ್ರಾಯಪಟ್ಟರು.
ನೆಹರು ಯುವ ಕೇಂದ್ರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ, ರೋಟರಿ ಸಂಸ್ಥೆ ಹಾಗೂ ಶ್ರೀವರಮಹಾಲಕ್ಷ್ಮೀ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಸಹಯೋಗದಲ್ಲಿ ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಆಹಾರ ಮೇಳ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿಯಂತೆ ಉತ್ತಮ ಆಹಾರ ಸೇವನೆ ಮಾರ್ಗ ಬಲ್ಲವರು ಆರೋಗ್ಯ ಪೂರ್ಣ ಜೀವನ ನಡೆಸಬಹುದಾಗಿದೆ. ಇಂತಹ ಕಾರ್ಯಕ್ರಮಗಳಿಂದ ಗ್ರಾಮೀಣ ಭಾಗದ ಆಹಾರ ಪದಾರ್ಥಗಳ ಬಗ್ಗೆ ಅರಿವು ಹೊಂದಬಹುದಾಗಿದೆ. ಕೋವಿಡ್ ನಂತರ ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಅರಿವು ಹೆಚ್ಚಾಗಿದೆ. ನಿಯಮಿತ ಆಹಾರ ಬಳಕೆ ಹಾಗೂ ಆಹಾರ ಪದಾರ್ಥ ತಯಾರಿಕೆಯಲ್ಲಿ ಶುಚಿತ್ವವನ್ನು ಬಹುಮುಖ್ಯವಾಗಿ ಕಾಪಾಡಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್ ಮಾತನಾಡಿ, ಮನುಷ್ಯ ಆಧುನಿಕತೆಯ ಹೊಡೆತಕ್ಕೆ ಸಿಲುಕಿ ನಗರ ಪ್ರದೇಶದಲ್ಲಿ ದೇಸಿಯ ಆಹಾರ ಪದಾರ್ಥಗಳಿಂದ ದೂರವಾಗುತ್ತಿದ್ದಾನೆ. ಈ ಆಹಾರ ಮೇಳ ಹಬ್ಬದ ವಾತಾವರಣ ಸೃಷ್ಟಿಸಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾದ ಆಹಾರ ಸೇವನೆ ಇರಬೇಕು. ಗುಣಮಟ್ಟದ ಸ್ಥಳೀಯ ಆಹಾರದ ಕಡೆಗೆ ಜನರು ಹೆಚ್ಚಿನ ಒತ್ತು ನೀಡಬೇಕು. ಆಹಾರದ ಜತೆಗೆ ಆಚಾರ, ವಿಚಾರ ಹಾಗೂ ಉತ್ತಮ ಸಂಸ್ಕೃತಿಯನ್ನೂ ಯುವಕ, ಯುವತಿಯರು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಜಿ.ಅಂಕಶೆಟ್ಟಿ, ಗೋವಿಂದಶೆಟ್ಟಿ, ಭಾರತ ಸೇವಾದಳ ಜಿಲ್ಲಾಧ್ಯಕ್ಷ ಬಿ.ವಿ.ವೆಂಕಟನಾಗಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಎಂ.ಬಿ.ಮಹೇಶ್, ಅಭಿವೃದ್ಧಿ ಅಧಿಕಾರಿ ಕೆ.ಎಸ್.ಮಂಜುನಾಥ್, ಜೈ ಭುವನೇ ಶ್ವರಿ ಕನ್ನಡ ಯುವ ವೇದಿಕೆ ಗೌರವಾಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಅಧ್ಯಕ್ಷ ಜಿ.ಬಂಗಾರು, ನೆಹರು ಯುವ ಕೇಂದ್ರದ ಸಹನಾ ಇತರರು ಉಪಸ್ಥಿತರಿದ್ದರು.
ಆಹಾರ ಮೇಳಕ್ಕೆ ಚಾಲನೆ
ವಿದ್ಯಾರ್ಥಿಗಳು ತಯಾರಿಸಿದ್ದ ಸಿಹಿ ತಿನಿಸುಗಳನ್ನು ಸವಿಯುವುದರ ಮೂಲಕ ಆಹಾರ ಮೇಳಕ್ಕೆ ಪ್ರಧಾನ, ಜಿಲ್ಲಾ ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಚಾಲನೆ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ವಿಶ್ವ ವಿದ್ಯಾಲಯದ 12 ವಿದ್ಯಾರ್ಥಿಗಳು ಹಾಗೂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಭಾಗವಹಿಸಿ ಆಪಲ್ ಪೇಡಾ, ಟೊಯೋಟಾ ಸ್ಲೈಡ್, ಚಾಕ್ಲೇಟ್ ಫಟ್, ಓರಿಯೋ ಸ್ವೀಜ್ ರೋಲ್, ಚಾಕ್ಲೇಟ್ ಬರ್ಫಿ, ಓರಿಯೋ ಕೇಕ್, ಮೊಸರು ಅವಲಕ್ಕಿ, ಹೆಸರು ಬೇಳೆ, ರಸಾಯನ, ಚಿಪ್ಸ್ ಮಸಾಲಾ ಲಡ್ಡು, ವೆಜಿಟೇಬಲ್ ಸಲಾಡ್, ಬೇಲ್ ಪುರಿ, ಹೆಸರು ಕಾಳು ಕೋಸಂಬರಿ ಹಾಗೂ ಇತರ ಪದಾರ್ಥಗಳನ್ನು ಶುಚಿ, ರುಚಿಯಾಗಿ ತಯಾರಿಸಿದ್ದರು. ಭಾಗವಹಿಸಿದ್ದ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು.
125 ವಿದ್ಯಾರ್ಥಿಗಳಿಗೆ ಸನ್ಮಾನ
2022-23 ನೇ ಸಾಲಿನ ಪ್ರತಿಭಾವಂತ 125 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳುವುದು ಸುಲಭದ ಮಾತಲ್ಲ. ನಾನು ಉನ್ನತ ಹುದ್ದೆಗಳನ್ನು ಪಡೆಯುತ್ತೇನೆ ಎಂಬ ಗುರಿಯೊಂದಿಗೆ ವಿದ್ಯಾರ್ಥಿಗಳು ಸಾಗಬೇಕು. ಈ ದೃಷ್ಟಿಯಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಹಕಾರಿ ಎಂದರು.
ಜಿಲ್ಲೆಯಲ್ಲಿ ಶೈಕ್ಷಣಿಕ ವಲಯ ಅಭಿವೃದ್ಧಿಯತ್ತ ಸಾಗುತ್ತಿದೆ. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ವಸತಿ ಪ್ರಥಮದರ್ಜೆ ಕಾಲೇಜು ಉದ್ಘಾಟನೆಗೆ ಸಿದ್ಧವಾಗಿದೆ. ವಿದ್ಯಾರ್ಥಿಗಳು ತಮ್ಮ ಗುರು-ಹಿರಿಯರನ್ನು ಸದಾ ನೆನಪಿನಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹಾರೈಸಿದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಂಜಪ್ಪ ಶೆಟ್ಟಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಕೆ.ನಾಗರಾಜು, ನಗರಸಭಾ ಸದಸ್ಯ ರಾಮಸಮುದ್ರ ಸುರೇಶ್, ಉಪನ್ಯಾಸಕ ಕೆ.ಎಸ್.ಮಹೇಶ್, ಉಪನ್ಯಾಸಕಿ ಮೇಘನಾ ಸುರೇಶ್ ಇತರರು ಭಾಗವಹಿಸಿದ್ದರು.