ಕನಕರ ಕೀರ್ತನೆಗಳಿಂದ ಬದಲಾವಣೆ ಸಾಧ್ಯ

IMG-20231130-WA0100
Published on

ಚಾಮರಾಜನಗರ : ಸಮಾಜದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಶ್ರೀ ಕನಕದಾಸರ ಕೀರ್ತನೆಗಳು ಅತ್ಯಂತ ಸಹಕಾರಿಯಾಗಿವೆ ಎಂದು ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.

ನಗರದ ವರನಟ ಡಾ.ರಾಜ್ಕುಮಾರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಭಕ್ತಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಡಿನಲ್ಲಿ ದಾಸ ಪರಂಪರೆ ಅತ್ಯಂತ ಶ್ರೀಮಂತ ಮತ್ತು ಶ್ರೇಷ್ಠ ಪರಂಪರೆಯಾಗಿದೆ. ಕನಕದಾಸರ ಕೀರ್ತನೆಗಳು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದ್ದು, ಸಾಕಷ್ಟು ಬದಲಾವಣೆ ತಂದಿದೆ. ಸಮಾಜದಲ್ಲಿ ಇದ್ದ ಮೌಢ್ಯ, ಜಾತೀಯತೆ ಇನ್ನಿತರ ಸಮಸ್ಯೆಗಳ ವಿರುದ್ಧ ಕೀರ್ತನೆಗಳನ್ನು ರಚಿಸಿ ಸಾಕಷ್ಟು ಸುಧಾರಣೆ ಮಾಡಿದರು. ಅಂತಹ ಕನಕದಾಸರ ಕೀರ್ತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ತಿಳಿಸಿದರು.

ಕನಕದಾಸರು ಒಂದೇ ಸಮಾಜಕ್ಕೆ ಸೀಮಿತವಲ್ಲ, ಎಲ್ಲ ಸಮುದಾಯದ ಜನರಿಗೆ ಸೇರಿದವರು. ಅಂತಹ ಮಹಾನುಭಾವರ ಕೊಡುಗೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಅನೇಕ ಮಹನೀಯರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಅವರ ಸಂದೇಶ, ವಿಚಾರಧಾರೆಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕು. ಕನಕ ಭವನ ಪೂರ್ಣಕ್ಕೆ ಹೆಚ್ಚಿನ ಅನುದಾನ ಕೊಡಿಸುವಂತೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಮತ್ತು ಸಂಶೋಧಕ ಡಾ.ರಾಜಶೇಖರ್ ಜಮದಂಡಿ ಮಾತನಾಡಿ, ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಮನುಷ್ಯನಲ್ಲಿರುವ ಕಲ್ಮಶವನ್ನು ಹೊರಹಾಕಿ, ಆತನನ್ನು ತಿದ್ದುವ ಕೀರ್ತನೆಗಳಾಗಿವೆ. 15ನೇ ಶತಮಾನದಲ್ಲಿ ಬಾಳಿ ಬದುಕಿದ ಕನಕದಾಸರು ಬಹಳ ಶ್ರೀಮಂತಿಕೆಯಲ್ಲಿ ಬದುಕು ಸಾಗಿಸಿದವರು. ತನಗೆ ಸಿಕ್ಕಿದ್ದ ಹೊನ್ನನ್ನು ಸಮಾಜ ಸೇವೆಗೆ ಹಾಗೂ ದೇವಾಲಯಗಳ ನಿರ್ಮಾಣ ಮಾಡಲು ಬಳಸಿದರು. ಕನಕ ಮತ್ತು ಪುರಂದರದಾಸರು ಕನ್ನಡ ಸಾಹಿತ್ಯದಲ್ಲಿ ಅಶ್ವಿನಿ ದೇವತೆಗಳು ಇದ್ದಂತೆ. ಅವರ ಚಿಂತನೆಗಳು ಸದಾಕಾಲವೂ ಜೀವಂತವಾಗಿವೆ. ಶರಣ ತತ್ವಗಳನ್ನು ದಾಸ ಪರಂಪರೆಯ ದಾರ್ಶನಿಕರು ಪಾಲಿಸಿಕೊಂಡು ಬಂದರು ಎಂದು ಹೇಳಿದರು.

ಕಾಲಕ್ಕೆ ಸಾಕಷ್ಟು ಸಮಸ್ಯೆಗಳು ಕನಕದಾಸರಿಗೆ ಎದುರಾಗುತ್ತವೆ. ಆದರೆ ತನ್ನ ಆಧ್ಯಾತ್ಮಿಕ ಚಿಂತನೆಯಿಂದ ಎಲ್ಲವನ್ನೂ ಬಗೆಹರಿಸಿ ಸಾಗುತ್ತಾರೆ. ಅಂತರಂಗದ ತಿರುಳನ್ನು ಕಾಣುತ್ತಿದ್ದ ಕನಕದಾಸರ ನಡೆ ನಮ್ಮೆಲ್ಲರಿಗೂ ದಾರಿದೀಪವಾಗಬೇಕು. ಕನಕದಾಸರು ದಿವ್ಯ ದೃಷ್ಟಿಯನ್ನು ಹೊಂದಿದ್ದರು. ಕನಕದಾಸರ ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು ಅನುಸರಿಸಬೇಕು. ಹಾಗಿದ್ದಾಗ ಮಾತ್ರ ಕನಕದಾಸರ ದಿನಾಚರಣೆಗೆ ಅರ್ಥ ಬರುತ್ತದೆ. ನಾವೆಲ್ಲರೂ ಉತ್ತಮ ಮನುಷ್ಯರಾಗಲು ಮಾನವೀಯತೆಯನ್ನು ಒಳಗೊಂಡ ಕನಕದಾಸರ ಕೀರ್ತನೆಗಳು ಸಹಕಾರಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಬಿಆರ್‌ಟಿ ನಿರ್ದೇಶಕಿ ದೀಪಾ ಜೆ.ಕಾಂಟ್ರ್ಯಾಕ್ಟರ್, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಬಸವರಾಜ್, ಕನಿಷ್ಠ ವೇತನ ಆಯೋಗ ಮಂಡಳಿ ಮಾಜಿ ಅಧ್ಯಕ್ಷ ಮತ್ತು ತಾಲೂಕು ಕುರುಬರ ಸಂಘದ ಅಧ್ಯಕ್ಷ ಆರ್.ಉಮೇಶ್, ಗೌರವಾಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಮಹದೇವಸ್ವಾಮಿ ರಾಮಸಮುದ್ರ ಹಾಗೂ ಇತರರು ಉಪಸ್ಥಿತರಿದ್ದರು.

ಅದ್ದೂರಿ ಭಾವಚಿತ್ರ ಮೆರವಣಿಗೆ: ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಭಕ್ತಶ್ರೇಷ್ಠ ಶ್ರೀ ಕನಕದಾಸ ಜಯಂತಿ ಅಂಗವಾಗಿ ಆಯೋಜಿಸಿದ್ದ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ನಗರದ ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ ಸುಲ್ತಾನ್ ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀ ಭುವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸಾಗಿ ವೇದಿಕೆ ಕಾರ್ಯಕ್ರಮ ನಡೆದ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಂತ್ಯವಾಯಿತು. ಮೆರವಣಿಗೆಯಲ್ಲಿ ನಂದಿಧ್ವಜ, ಗೊರವರ ಕುಣಿತ, ಕಂಸಾಳೆ, ನಗಾರಿ ಹಾಗೂ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಮೆರವಣಿಗೆಯ ಉದ್ದಕ್ಕೂ ಸಮುದಾಯದ ಯುವಕರು ಕುಣಿದು ಕುಪ್ಪಳಿಸಿ, ಜೈಕಾರ ಕೂಗಿ ಸಂಭ್ರಮಿಸಿದರು.

ತಡವಾದ ಕಾರ್ಯಕ್ರಮ: ಶ್ರೀ ಕನಕದಾಸ ಜಯಂತಿ ವೇದಿಕೆ ಕಾರ್ಯಕ್ರಮ ತಡವಾಗಿ ಪ್ರಾರಂಭವಾದ ಕಾರಣದಿಂದ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಬೇಸರ ಹೊರಹಾಕಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಬಂದಿದ್ದ ಸಂಶೋಧಕ ಡಾ.ರಾಜಶೇಖರ್ ಜಮದಂಡಿ ಅವರು ಬೆಳಿಗ್ಗೆ 11 ಗಂಟೆಗೆ ವೇದಿಕೆ ಮುಂಭಾಗಕ್ಕೆ ಆಗಮಿಸಿದರು. ಆದರೆ ಕಾರ್ಯಕ್ರಮ 3 ಗಂಟೆಗೆ ಪ್ರಾರಂಭವಾಯಿತು. ಈ ಕಾರಣಕ್ಕೆ ಕಾರ್ಯಕ್ರಮದಲ್ಲೇ ಬೇಸರ ಹೊರಹಾಕಿದರು. ಇಂತಹ ಕಾರ್ಯಕ್ರಮಗಳಲ್ಲಿ ಸಮಯ ಪರಿಪಾಲನೆ ಬಹಳ ಮುಖ್ಯವಾಗಿರಬೇಕು. ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿರುವವರು ಸಮಯಕ್ಕೆ ಸರಿಯಾಗಿ ಆಯೋಜನೆ ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ಅವರು ಮಾತನಾಡುವ ವೇಳೆ, ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳು ಹೀಗೆ ಆಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net