ಕನ್ನಡ ರಾಜ್ಯೋತ್ಸವ ನವೆಂಬರ್‌ಗೆ ಸೀಮಿತವಾಗದಿರಲಿ

30chn1(jss College)
Published on

ಚಾಮರಾಜನಗರ: ಕನ್ನಡ ಭಾಷೆ ಬಳಕೆಯ ಮೂಲಕ ಭಾಷೆಯನ್ನು ಉಳಿಸಿ, ಬೆಳೆಸಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಮಹದೇವ ಶಂಕನಪುರ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದಿಂದ ಬುಧವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಇದು ಇಷ್ಟಕ್ಕೇ ಸೀಮಿತವಾಗಬಾರದು, ನಿರಂತರವಾಗಿರಬೇಕು ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲೆ ಕಪ್ಪುಶಿಲೆ, ರೇಷ್ಮೆ, ಶ್ರೆಗಂಧ, ಜಾನಪದ ಮಹಾಕಾವ್ಯಗಳಿಂದ ಗುರುತಿಸಿಕೊಳ್ಳುತ್ತದೆ. ನಮ್ಮ ಜಿಲ್ಲೆಯ ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ ಮಹಾಕಾವ್ಯಗಳು ಹೆಮ್ಮೆಯಾಗಿವೆ. ಮಲೆ ಮಹದೇಶ್ವರ ಕಾವ್ಯ ಫಿನ್ಲೆಂಡಿನ ಕಲೇವಾಲ ಹೊರತುಪಡಿಸಿದರೆ ಜಗತ್ತಿನ ಎರಡನೇ ಸುದೀರ್ಘ ಮಹಾಕಾವ್ಯಗಳಾಗಿದೆ. ಇದನ್ನು ಕೊಡುಗೆಯಾಗಿ ಕೊಟ್ಟವರು ಅನಕ್ಷರಸ್ಥರೆನಿಸಿದ ತಂಬೂರಿ ಮತ್ತು ಕಂಸಾಳೆ ಗಾಯಕರು ಎಂದು ತಿಳಿಸಿದರು.

ವರನಟ ಡಾ. ರಾಜ್‌ಕುಮಾರ್ ನಮ್ಮ ಜಿಲ್ಲೆಯ ಕಲಾವಿದರು. ಅವರು ಮತ್ತು ಅವರ ಪುತ್ರರಿಂದ ನಮ್ಮ ಜಿಲ್ಲೆಗೆ ಕೀರ್ತಿ ಹೆಮ್ಮೆ ಬಂದಿದೆ. ಜಿಲ್ಲೆಯ ಹಲವಾರು ಲೇಖಕರು, ವಿದ್ವಾಂಸರು ಸಾಹಿತ್ಯ ಕೃಷಿ ಮಾಡಿ ಕೊಡುಗೆ ನೀಡಿದ್ದಾರೆ. ಕನ್ನಡ, ಸಂಸ್ಕೃತ, ತಮಿಳು ಭಾಷೆಗಳಲ್ಲಿ 965 ಶಾಸನಗಳು ನಮ್ಮ ಜಿಲ್ಲೆಯಲ್ಲಿ ದೊರೆತಿವೆ ಎಂದರು.

ತೋಂಟದ ಸಿದ್ದಲಿಂಗ ಯತಿಗಳು, ಪೂಜ್ಯಪಾದರು, ನಾಗಾರ್ಜುನ, ದೇವಚಂದ್ರ ಸಂಚಿಯ ಹೊನ್ನಮ್ಮ, ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿಗಳು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮೌಖಿಕ, ಜನಪದ ಕ್ಷೇತ್ರಕ್ಕೆ ನಮ್ಮ ಜಿಲ್ಲೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ವರಪ್ರಸಾದ್ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಎ.ಎಂ. ಶಿವಸ್ವಾಮಿ ಜನಪದ ಗೀತೆಗಳನ್ನು ಹಾಡಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಹದೇವಪ್ಪ, ಸಹ ಪ್ರಾಧ್ಯಾಪಕರಾದ ಉಮೇಶ್, ಎಸ್. ಗುಣ, ವಿದ್ಯಾರ್ಥಿನಿ ವರ್ಷಾ ಹತ್ವಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net