ಜಾನುವಾರುಗಳಿಗೆ ಮೇವಿನ ಸಮಸ್ಯೆ

27chn2
Published on

ಹನೂರು: ತಾಲೂಕಿನಲ್ಲಿ ಬರದ ಛಾಯೆ ಆವರಿಸಿರುವುದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಆದರೆ ಅರಣ್ಯ ಇಲಾಖೆ ದನ, ಕರುಗಳನ್ನು ಮೇಯಿಸಲು ಕಾಡಿಗೆ ಬಿಡುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಹನೂರು ತಾಲೂಕಿನಲ್ಲಿ ಹೆಚ್ಚು ರೈತರು ಕೃಷಿಯ ಜತೆಗೆ ಹೈನುಗಾರಿಗೆಯನ್ನು ಮಾಡುತ್ತಿದ್ದು, ಜಾನುವಾರುಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ 66,107 ಹಸುಗಳಿದ್ದು, ಇದರಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಹಸುಗಳು ಮಲೆಮಹದೇಶ್ವರ ಬೆಟ್ಟ, ಗೋಪಿನಾಥಂ ಹಾಗೂ ಪೊನ್ನಾಚಿ ಭಾಗದಲ್ಲಿದೆ. ಇದರಲ್ಲಿ ಬರಗೂರು, ಆಲಂಬಾಡಿ ಸೇರಿದಂತೆ ಹೆಚ್ಚು ದೇಶಿ ತಳಿಯ ಹಸುಗಳಿರುವುದು ವಿಶೇಷ. ಈ ಹಿಂದೆ ಈ ಭಾಗದಲ್ಲಿನ ರೈತರು ಬೇಸಿಗೆ ವೇಳೆ ಜಾನುವಾರುಗಳ ಮೇವಿಗಾಗಿ ಪ್ರಸ್ತುತವಿರುವ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ದನದ ದೊಡ್ಡಿಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಇತ್ತ ಕಾಡಂಚಿನ ಭಾಗದಲ್ಲಿರುವ ಮಾರ್ಟಳ್ಳಿ ಹಾಗೂ ಪಿ.ಜಿ ಪಾಳ್ಯ ಭಾಗದ ರೈತರು ಜಾನುವಾರುಗಳನ್ನು ಕಾಡಿನಲ್ಲಿ ಮೇಯಲು ಬಿಡುತ್ತಿದ್ದರು. ಆದರೆ ಅರಣ್ಯ ಕಾಯ್ದೆಯಿಂದ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರದೇಶದಲ್ಲಿ ದನದ ದೊಡ್ಡಿಗಳನ್ನು ನಿರ್ಮಿಸಲು ನಿಷೇಧ ವಿಧಿಸಲಾಗಿದೆ. ಇತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಜಾನುವಾರುಗಳನ್ನು ಕಾಡಿನೊಳಗೆ ಮೇಯಲು ಬಿಡುತ್ತಿಲ್ಲ. ಇದರಿಂದ ಬಹುತೇಕ ರೈತರು ಅರಣ್ಯದಂಚು, ಜಮೀನು ಆಸುಪಾಸು ಹಾಗೂ ಮಾಳಗಳಲ್ಲಿ ಹಸುಗಳನ್ನು ಬಿಟ್ಟು ಮೇಯಿಸುತ್ತಿದ್ದರು.

ಆದರೆ ಈ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ಹನೂರು ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿದ್ದು, ಜಾನುವಾರುಗಳ ಮೇವಿಗೆ ಸಮಸ್ಯೆ ಉಂಟಾಗಿದೆ. ಇದರಿಂದ ಕೆಲ ರೈತರು ಜಾನುಗಾರುಗಳಿಗೆ ಮೇವು ಪೂರೈಸಲು ಸಾಧ್ಯವಾಗದೇ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಇನ್ನು ಕೆಲವರು ಹಣ ನೀಡಿ ಮೇವನ್ನು ತಂದು ಜಾನುವಾರುಗಳಿಗೆ ನೀಡುತ್ತಿದ್ದಾರೆ. ಇದರಿಂದ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಮೇವಿಗಾಗಿ ಜಾನುವಾರುಗಳನ್ನು ಕಾಡಿಗೆ ಬಿಡದ ವಿಚಾರವಾಗಿ ರೈತಪರ ಸಂಘಟನೆಗಳು ಅರಣ್ಯ ಇಲಾಖೆಯ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದೀಗ ಮೇವಿನ ಸಮಸ್ಯೆ ತೀವ್ರವಾಗಿರುವುದರಿಂದ ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡಬೇಕು ಇಲ್ಲವೇ ಗೋಶಾಲೆ ತೆರೆದು ಮೇವು ಪೂರೈಸಬೇಕು ಎಂಬುದಾಗಿ ರೈತರು ಒತ್ತಾಯಿಸಿದ್ದು, ಈ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

*ಗೋಶಾಲೆ ತೆಗೆದು ಮೇವು ಒದಗಿಸಿ
ಲೊಕ್ಕನಹಳ್ಳಿ ಹಾಗೂ ಪಿ.ಜಿ ಪಾಳ್ಯ ಭಾಗದಲ್ಲಿನ ಹೆಚ್ಚು ರೈತರು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಜಾನುವಾರುಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ಈ ಹಿಂದೆ ಹಸುಗಳನ್ನು ಕಾಡಿಗೆ ಕರೆದೊಯ್ದು ಮೇವನ್ನು ಪೂರೈಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಅರಣ್ಯ ಇಲಾಖೆ ಹಸುಗಳನ್ನು ಮೇಯಲು ಬಿಡುತ್ತಿಲ್ಲ. ಆದರೆ ಈಗ ತಾಲೂಕಿನಲ್ಲಿ ಬರ ಇರುವುದರಿಂದ ಮೇವಿಗೆ ಸಮಸ್ಯೆಯಾಗಿದೆ. ಇದರಿಂದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಗೋಶಾಲೆ ತೆರೆದು ಜಾನುವಾರುಗಳಿಗೆ ಮೇವು ಒದಗಿಸಬೇಕು.
ಜಗಧೀಶ್, ಲೊಕ್ಕನಹಳ್ಳಿ ಗ್ರಾಮಸ್ಥ, ಹನೂರು.

*ಮೇವಿಗೆ ಸಮಸ್ಯೆ ಉಂಟಾಗಿದೆ
ಹನೂರು ತಾಲೂಕಿನ ಕಾಡಂಚಿನಲ್ಲಿರುವ ಬಹುತೇಕ ಗಿರಿಜನರು ಹಸುಗಳನ್ನು ಸಾಕಾಣೆ ಮಾಡುತ್ತಿದ್ದು, ಹಿಂದೆ ಕಾಡು ಮೇಡುಗಳಲ್ಲಿ ಹಸುಗಳನ್ನು ಬಿಟ್ಟು ಮೇಯಿಸಲಾಗಿತ್ತು. ಆದರೀಗ ಇದಕ್ಕೆ ಅರಣ್ಯ ಇಲಾಖೆ ನಿಷೇಧ ವಿಧಿಸಿದೆ. ಆದರೆ ಈ ಬಾರಿ ಮಳೆಯಿಲ್ಲದ ಪರಿಣಾಮ ಮೇವಿನ ಸಮಸ್ಯೆ ಉಂಟಾಗಿದೆ. ಇದರಿಂದ ಜಾನುವಾರುಗಳ ಮೇವಿಗಾಗಿ ಅಲೆಯುಂತಾಗಿದ್ದು, ಸಮಸ್ಯೆಯಾಗಿದೆ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು.
ರಂಗೇಗೌಡ, ತಾಲೂಕು ಸೋಲಿಗ ಅಭಿವೃದ್ಧಿ ಸಂಘ, ಹನೂರು.

*ಕಾಯ್ದೆಯ ನೆಪದಲ್ಲಿ ದಬ್ಬಾಳಿಕೆ
ದೇಶಿ ತಳಿಯ ಹಸುಗಳು ಸಮೃದ್ಧಿಯ ಸಂಕೇತ. ಮ.ಬೆಟ್ಟದ ತಪ್ಪಲಿನ ಭಾಗದಲ್ಲಿ ಈ ಹಸುಗಳನ್ನು ಗೋ ಮಾತೆ ಎಂದು ಪೂಜಿಸಲಾಗುತ್ತಿದೆ. ಹಾಗಾಗಿ ದೇಶಿ ತಳಿಯ ಹಸುಗಳನ್ನು ರಕ್ಷಿಸುತ್ತಾ ಬರಲಾಗುತ್ತಿದೆ. ಈ ಹಿಂದೆ ರೈತರು ಅರಣ್ಯ ಪ್ರದೇಶದಲ್ಲಿ ದೊಡ್ಡಿಗಳನ್ನು ನಿರ್ಮಿಸಿಕೊಂಡು ಹಸುಗಳನ್ನು ಮೇಯಿಸಲಾಗುತ್ತಿದ್ದು, ನಾನು ಸಹ ಮೇಯಿಸಿದ್ದೇನೆ. ಆದರೆ ಅರಣ್ಯ ಇಲಾಖೆ ಕಾಯ್ದೆಯ ನೆಪವೊಡ್ಡಿ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಈ ಬಗ್ಗೆ ಹೋರಾಟ ನಡೆಸಲಾಗಿದೆ. ಆದ್ದರಿಂದ ದೇಶಿ ತಳಿ ಹಸುಗಳು ಉಳಿಯಬೇಕಾದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು.
ಚಂಗಡಿ ಕರಿಯಪ್ಪ, ಅಧ್ಯಕ್ಷ, ತಾಲೂಕು ರೈತ ಸಂಘ ಹನೂರು.

*ಹಸುಗಳ ಮಾರಾಟ
ಪೊನ್ನಾಚಿ ಭಾಗದಲ್ಲೂ ಮೇವಿನ ಸಮಸ್ಯೆ ತಲೆದೂರಿರುವುದರಿಂದ ಕೆಲವರು ಹಸುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ವಾರದಲ್ಲಿ ಕನಿಷ್ಠ 5 ಹಸುಗಳು ಮಾರಾಟವಾಗುತ್ತಿದೆ. ಇನ್ನು ಉಳ್ಳವರು ಹಣ ನೀಡಿ ಮೇವನ್ನು ಖರೀದಿಸುತ್ತಿದ್ದರೆ ಇನ್ನು ಕೆಲವರು ಮಾಳಗಳಲ್ಲಿ ಮೇಯಿಸುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಹಸುಗಳನ್ನು ಮೇಯಿಸಲು ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಹಸುಗಳ ಸಂತತಿ ಕ್ಷೀಣಿಸಲಿದೆ.
ರಾಜು, ಸಮಾಜ ಸೇವಕ ಪೊನ್ನಾಚಿ ಗ್ರಾಮ, ಹನೂರು.

*ರೈತರಿಗೂ ಜವಾಬ್ದಾರಿ ಇದೆ
ತಾಲೂಕಿನಲ್ಲಿ ಈ ಹಿಂದೆ ವೈಲ್ಡ್‌ಲೈಪ್ ಇರಲಿಲ್ಲ. ಆದಾಗಿನಿಂದ ಇಂದಿನವರೆಗೂ ರೈತರು ಹಸುಗಳನ್ನು ಮೇಯಿಸುವುದರೊಂದಿಗೆ ಕಾಡನ್ನು ರಕ್ಷಿಸುತ್ತಾ ಬಂದಿದ್ದಾರೆ. ಹಾಗಾಗಿ ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಷ್ಟು ಜವಬ್ದಾರಿ ಇದೆಯೋ ಅಷ್ಟೋ ರೈತರಿಗೂ ಇದೆ. ಅಂತಹದರಲ್ಲಿ ಇತ್ತೀಚಗೆ ಹಸುಗಳನ್ನು ಕಾಡಿಗೆ ಮೇಯಲು ಬಿಡದಿರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಇದೀಗ ಮೇವಿನ ಸಮಸ್ಯೆ ಇರುವುದರಿಂದ ಹಸುಗಳನ್ನು ಮೇಯಿಸಲು ಅವಕಾಶ ನೀಡಬೇಕು.
ಅಮ್ಜಾದ್‌ಖಾನ್, ಅಧ್ಯಕ್ಷ, ತಾಲೂಕು ರೈತ ಸಂಘ, ಹನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net