ಪೊಲೀಸರಿಗೆ ದೈಹಿಕ, ಮಾನಸಿಕ ಸಾಮರ್ಥ್ಯ ಬಹುಮುಖ್ಯ

25chn5
Published on

ಚಾಮರಾಜನಗರ: ನಿರಂತರವಾಗಿ ಕರ್ತವ್ಯದಲ್ಲಿ ಇರಬೇಕಾದ ಪೊಲೀಸರಿಗೆ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸಾಮರ್ಥ್ಯ ಅಗತ್ಯ ಎಂದು ದಕ್ಷಿಣ ವಲಯ ಐಜಿಪಿ ಎಂ.ಜಿ.ಬೋರಲಿಂಗಯ್ಯ ಸಲಹೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಪೊಲೀಸರು ಕರ್ತವ್ಯದ ಸಮಯದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತೇವೆ. ಕೆಲವು ಬಾರಿ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಸನ್ನಿವೇಶಗಳನ್ನು ಎದುರಿಸಲು ಮಾನಸಿಕ ಸಾಮರ್ಥ್ಯ ಬಹುಮುಖ್ಯವಾಗುತ್ತದೆ. ಈಗಾಗಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಆಧುನಿಕತೆ ಮುಂದುವರಿಯುತ್ತಲೇ ನಮ್ಮ ಜೀವನ ಶೈಲಿ ಬದಲಾಗುತ್ತಿದೆ. ಬದಲಾದ ಆಹಾರ ಪದ್ಧತಿಯಿಂದ ಅನೇಕ ಖಾಯಿಲೆಗಳು ಬರುತ್ತಿದೆ. ಇಂತಹ ಸಂದರ್ಭದಲ್ಲಿ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವುದೇ ರಾಮಬಾಣವಾಗಿದೆ. ಪೊಲೀಸರು ಕ್ರೀಡಾಕೂಟಕ್ಕೆ ಸಿಮೀತವಾಗದೇ, ಇದನ್ನು ಜೀವನದ ಭಾಗವಾಗಿ ಮಾಡಿಕೊಳ್ಳಿ. ನಿತ್ಯವೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಿಸಾಹು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್, ಡಿವೈಎಸ್‌ಪಿ ಸೋಮೇಗೌಡ ಹಾಜರಿದ್ದರು.

ಕೃಷ್ಣಪ್ಪ, ಪ್ರಿಯಾಂಕ ಚಾಂಪಿಯನ್:
ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಜಿಲ್ಲಾ ಸಶಸ ಮೀಸಲು ಪಡೆಯ ಎಎಸ್‌ಐ ಕೃಷ್ಣಪ್ಪ ಹಾಗೂ ಮಹಿಳೆಯರ ವಿಭಾಗದಲ್ಲಿ ಸೆನ್ ಠಾಣೆಯ ಕಾನ್‌ಸ್ಟೆಬಲ್ ಪ್ರಿಯಾಂಕಾ ವೈಯಕ್ತಿಕ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು. ತಂಡ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲಾ ಸಶಸ ಮೀಸಲು ಪಡೆಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಬ್ರಿಗೇಡಿಯರ್ ಮಲ್ಲಪ್ಪ ಟ್ರೋಫಿಗೆ ರಾಮಾಪುರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ನವೀನ್ ಕುಮಾರ್ ಭಾಜನರಾದರು. ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಚಾಮರಾಜನಗರ ಉಪವಿಭಾಗದಿಂದ ಗುಂಡ್ಲುಪೇಟೆ ಠಾಣೆಯ ಕಾನ್‌ಸ್ಟೆಬಲ್ ಬಂಟಪ್ಪ, ಕೊಳ್ಳೇಗಾಲ ವಿಭಾಗದಿಂದ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಮಹೇಶ್, ಜಿಲ್ಲಾ ಸಶಸ ಮೀಸಲು ಪಡೆಯ ಆರ್.ಸಿ.ಕುಮಾರ್ ಬಹುಮಾನ ಪಡೆದುಕೊಂಡರು. ಹನೂರು ಪೊಲೀಸ್ ಠಾಣೆಗೆ 2023ನೇ ಸಾಲಿನ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿ ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net