ಮನುಷ್ಯನ ಅಂಗೈಲಿದೆ ಪರಿಸರದ ಅಳಿವು-ಉಳಿವು

17raju4
Published on

ಚಾಮರಾಜನಗರ: ಮನುಷ್ಯನ ಅಂಗೈನಲ್ಲೇ ಪರಿಸರ ಸಂರಕ್ಷಣೆ ಸಾಧ್ಯ ಎಂಬ ಮಹತ್ವ ಸಾರುವ ವಿವಿಧ ಚಿತ್ರಗಳಿಗೆ ವಿದ್ಯಾರ್ಥಿಗಳು ಬಣ್ಣ ಹಚ್ಚಿದರೆ, ಅದೇ ಅಂಗೈನಲ್ಲೇ ಪರಿಸರ ಮಾಲಿನ್ಯವು ಉಂಟಾಗುತ್ತಿದೆ ಎಂಬ ಅರಿವನ್ನು ಸಾರಿದರು.

ಪರಿಸರ ಜಾಗೃತಿಗಾಗಿ ಚಿತ್ರಕಲೋತ್ಸವ ಅಭಿಯಾನದ ಅಂಗವಾಗಿ, ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ತೇಜಸ್ ಸೇವಾ ಸಂಸ್ಥೆ, ಪವನ್ ಸೇವಾ ಟ್ರಸ್ಟ್ ಹಾಗೂ ಐಸೆಟ್ ಸಂಸ್ಥೆ ಸಹಯೋಗದಲ್ಲಿ ನಗರದ ಸೋಮವಾರಪೇಟೆ ಬಳಿ ಇರುವ ಎಂಸಿಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪರಿಸರ ಸಂರಕ್ಷಣೆ ಸಾರುವ ವೈವಿಧ್ಯಮಯ ಚಿತ್ರಗಳು ವಿದ್ಯಾರ್ಥಿಗಳ ಕುಂಚದಿಂದ ಮೂಡಿಬಂದವು.

ಭೂಮಿಯ ಮಹತ್ವ, ಭೂಮಂಡಲದಲ್ಲಿರುವ ಗಾಳಿ, ನೀರು, ಬೆಳಕು, ಬೆಂಕಿಯ ಅವಶ್ಯಕತೆಗಳನ್ನು ಮಕ್ಕಳ ಚಿತ್ರಗಳು ಸಾರುತ್ತಿದ್ದವು. ತಮ್ಮ ಕಲ್ಪನೆಯಲ್ಲೇ ಉಳಿದಿದ್ದ ಪರಿಸರ ಪ್ರೇಮ, ಬಿಳಿಯ ಹಾಳೆಗಳಲ್ಲಿ ಬಣ್ಣವಾದವು. ವಿದ್ಯಾರ್ಥಿಗಳ ಕಣ್ಣ ರೆಪ್ಪೆಯಲ್ಲಿ ಸೆರೆಯಾಗಿದ್ದ ತಮ್ಮ ಸುತ್ತಮುತ್ತಲಿನ ಬೆಟ್ಟ-ಗುಡ್ಡ, ನದಿ-ಕಣಿವೆ, ಗಿಡ-ಮರಗಳು ಬಣ್ಣದ ಬಳಪಗಳ ಮೂಲಕ ಹಾಳೆಯಲ್ಲಿ ಹರಡಿಕೊಂಡವು. ಪರಿಸರದ ಸಂರಕ್ಷಣೆಯ ಜತೆಗೆ ಪರಿಸರದ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳು ಚಿತ್ರಿಸಿದ್ದರು. ಒಟ್ಟು 51 ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತ 3 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ದುರಾಸೆಯಿಂದ ಪರಿಸರ ಮಾಲಿನ್ಯ: ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿರುವ ಪರಿಸರ ಪ್ರಜ್ಞೆ ಹಾಗೂ ಪ್ರತಿಭೆ ಅನಾವರಣಕ್ಕೆ ಇದು ಸೂಕ್ತ ವೇದಿಕೆಯಾಗಿದೆ. ನಾವೆಲ್ಲರೂ ಪರಿಸರದ ಭಾಗವಾಗಿದ್ದೇವೆ ಎಂಬುದನ್ನೇ ಮರೆತಿದ್ದೇವೆ. ನಮ್ಮ ದುರಾಸೆಯಿಂದ ಪರಿಸರವನ್ನು ಮಾಲಿನ್ಯ ಮಾಡುವುದರ ಜತೆಗೆ ನಾಶಗೊಳಿಸುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ವಿಸ್ತಾರವಾಗಬೇಕು. ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಯೊಂದು ಶಾಲೆಗಳು ಪೂರಕ ವಾತಾವರಣ ಸೃಷ್ಟಿಸಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.

ಪ್ರೌಢಶಾಲೆಯ ಪ್ರಾಂಶುಪಾಲ ಶಶಿಧರಮೂರ್ತಿ ಮಾತನಾಡಿ, ಈಗಾಗಲೇ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಕಲಾಸೇತು ಪೋರ್ಟಲ್‌ನಲ್ಲಿ ವಿವಿಧ ವಿಷಯಗಳನ್ನು ಚಿತ್ರಕಲೆಯ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮಗೆ ಇರುವುದೊಂದೆ ಭೂಮಿ, ಇದರ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಹಿಂದಿನ ಜನಾಂಗದಿಂದ ಈ ಭೂಮಿಯನ್ನು ಸಾಲ ಪಡೆದಿದ್ದೇವೆ. ಇದನ್ನು ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ಉಳಿಸಿ ಹೋಗುವುದು ನಮ್ಮ ಕರ್ತವ್ಯವಾಗಿದೆ. ಮನುಷ್ಯನ ದುರಾಸೆಯಿಂದ ಪರಿಸರ ಹಾಳಾಗುತ್ತಿದೆ, ವಾತಾವರಣದಲ್ಲಿ ಕಾರ್ಬನ್ ಡಯಾಕ್ಸೈಡ್ ಹೆಚ್ಚಾಗಿ ಓಜೋನ್ ಪದರಕ್ಕೆ ತೊಂದರೆಯಾಗುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಲೇ ನಗರದ ಜೋಡಿರಸ್ತೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ. ಪರಿಸರದಲ್ಲಿ ಸಮತೋಲನ ತರುವ ಅಭಿವೃದ್ಧಿ ಆಗಬೇಕು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಮುಖ್ಯಶಿಕ್ಷಕ ಎಚ್.ಎಂ.ಮಹದೇವಸ್ವಾಮಿ, ಶ್ರೀ ಜೈಭುವನೇಶ್ವರಿ ಕನ್ನಡ ಯುವವೇದಿಕೆ ಅಧ್ಯಕ್ಷ ಜಿ.ಬಂಗಾರು ಮಾತನಾಡಿದರು. ಎಂ.ಸಿ.ಎಸ್. ಶಾಲೆಯ ಆಡಳಿತಾಧಿಕಾರಿ ಎಂ.ನಾಗರಾಜ್, ಪವನ್ ಸೇವಾ ಟ್ರಸ್ಟ್‌ನ ಸಿ.ಎನ್.ಸಂಪತ್‌ಕುಮಾರ್, ಐಸೆಟ್ ಸಂಸ್ಥೆಯ ಅನಿಲ್ ಕುಮಾರ್, ಕಲಾವಿದ ಲೋಕೇಶ್, ಚಿತ್ರನಟ ಶ್ರೀ ಸಾಯಿಮಂಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net