ದಿ.ಕೆ.ಸಿ.ರಂಗಯ್ಯ ಸೇವೆ ನಿತ್ಯ ಸ್ಮರಣೀಯ

24chn2
Published on

ಚಾಮರಾಜನಗರ: ಶಿಕ್ಷಣ ತಜ್ಞ ದಿವಂಗತ ಕೆ.ಸಿ.ರಂಗಯ್ಯನವರ 100ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಚಿಂತನೆ ನಡೆಸಲಾಗಿದೆ ಎಂದು ಕೆ.ಸಿ.ರಂಗಯ್ಯ ಅಭಿಮಾನಿ ಬಳಗದ ಅಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ನಿಲಯದ ಆವರಣದಲ್ಲಿರುವ ಕೆ.ಸಿ.ರಂಗಯ್ಯ ಸ್ಮಾರಕದಲ್ಲಿ ಅಭಿಮಾನಿ ಬಳಗದ ಒಕ್ಕೂಟದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 15 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣತಜ್ಞ ದಿವಂಗತ ಕೆ.ಸಿ.ರಂಗಯ್ಯನವರ ಸೇವೆ ಅನನ್ಯವಾದದ್ದು, ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ. ಕೆ.ಸಿ.ರಂಗಯ್ಯನವರ 100 ನೇ ವರ್ಷದ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಅಭಿಮಾನಿ ಒಕ್ಕೂಟ ಚಿಂತನೆ ಮಾಡಿದೆ. ತಮ್ಮ ತ್ಯಾಗಮಯಿ ಬದುಕಿನಿಂದ ಕೆ.ಸಿ.ರಂಗಯ್ಯ ಶೋಷಿತ ಸಮುದಾಯದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಯಾವುದೇ ಅನುಕೂಲವಿಲ್ಲದ ಸಂದರ್ಭದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಚಾಮರಾಜನಗರದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿ, ಹಳ್ಳಿಹಳ್ಳಿಗೆ ಹೋಗಿ ಬಡವರ ಮಕ್ಕಳನ್ನು ಕರೆತಂದು ಅಕ್ಷರ, ಅನ್ನದಾಸೋಹ ಧಾರೆ ಎರೆದಿದ್ದಾರೆ. ದಲಿತ ಸಮುದಾಯದ ಮಕ್ಕಳು ಅಲ್ಲದೆ ಬೇರೆಬೇರೆ ಸಮುದಾಯಗಳ ಬಡ ಮಕ್ಕಳಿಗೂ ವಿದ್ಯಾಭ್ಯಾಸ ಕೊಟ್ಟಿದ್ದಾರೆ. ಅವರು ನೀಡಿದ ವಿದ್ಯಾಭ್ಯಾಸದ ನೆರವಿನಿಂದ ಇಂದು ಲಕ್ಷಾಂತರ ಮಂದಿ ಸರ್ಕಾರಿ ನೌಕರರಾಗಿ ಇಡೀ ರಾಜ್ಯಾದ್ಯಂತ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಈ ವೇಳೆ ಕೆ.ಸಿ.ರಂಗಯ್ಯ ಅಭಿಮಾನಿ ಬಳಗ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಅಲೂರು ಮಹದೇವಯ್ಯ, ಎಸ್.ಪಿ.ಮಹೇಶ್, ಬ್ಯಾಡಮೂಡ್ಲು ಬಸವಣ್ಣ, ಹೊಂಗನೂರು ಬಸವರಾಜು, ಕೆಸಿಆರ್ ಕೃಷ್ಣಮೂರ್ತಿ, ಶೀಲಾ,ಪ್ರಜ್ಞ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net