ಮತಾಂತರ ನಿಷೇಧ ಕಾನೂನು ಹಿಂಪಡೆಯದಿರಿ

17raju2
Published on

ಚಾಮರಾಜನಗರ: ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಬಾರದೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಸರ್ಕಾರ ಈ ಹಿಂದೆ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾನೂನನ್ನು ಹಿಂದಕ್ಕೆ ಪಡೆಯಬಾರದು ಎಂದು ಆಗ್ರಹಿಸಿದರು. ಭಾರತ ಹಿಂದು ರಾಷ್ಟ್ರವಾಗಿದ್ದು, ರಾಷ್ಟ್ರೀಯ ಮನೋಭಾವವನ್ನು ಪೋಷಿಸುವುದು, ರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆದ್ದರಿಂದ ಕೆಲವರು ಇಲ್ಲಿಯೇ ಇದ್ದುಕೊಂಡು ರಾಷ್ಟ್ರೀಯತೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ದೇಶದೊಳಗೆ ಹಿಂದುಗಳೊಂದಿಗೆ ಅನ್ಯಧರ್ಮಿಯರು ಅನ್ಯೋನ್ಯವಾಗಿ ಜೀವಿಸಲು ಸಂವಿಧಾನ ಅವಕಾಶ ನೀಡಿದೆ. ಕರ್ನಾಟಕದಲ್ಲೂ ಹಿಂದು ಧರ್ಮದೊಡನೆ ಅನ್ಯಧರ್ಮದ ಆಚರಣೆಗೆ ಅವಕಾಶವಿದೆ. ಇದನ್ನು ನಾವೂ ಒಪ್ಪುತ್ತೇವೆ. ಆದರೆ ಹಿಂದು ಧರ್ಮದವರಿಗೆ ಆಮಿಷವೊಡ್ಡಿ, ಮರಳು ಮಾಡಿ ಅಥವಾ ಹೆದರಿಸಿ, ಬಲವಂತವಾಗಿ ಮತಾಂತರ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಅನ್ಯಧರ್ಮಿಯರು ಮಾತ್ರವಲ್ಲದೆ ಹಿಂದುಗಳೂ ಸಹ ಹೆಚ್ಚು ಸಂಖ್ಯೆಯಲ್ಲಿ ಮತ ಹಾಕಿ ಗೆಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತರುವಂತೆ ಮಾಡಲು ಕಾಯ್ದೆಯನ್ನು ರದ್ದುಪಡಿಸುವುದು ಹಿಂದು ಸಮಾಜಕ್ಕೆ ದ್ರೋಹ ಬಗೆದಂತೆ. ಮಂತ್ರಿ ಮಂಡಲ ಕೈಗೊಂಡಿರುವ ತೀರ್ಮಾನವನ್ನು ಹಿಂಪಡೆಯಬೇಕೆಂದು ತಿಳಿಸಿದರು.


ಈ ಹಿಂದಿನ ಸರ್ಕಾರ ಪಠ್ಯ ಪುಸ್ತಕದಲ್ಲಿ ರಾಷ್ಟ್ರ ಪುರುಷರ ಪರಿಚಯವನ್ನು ಸೇರಿಸಿರುವುದನ್ನು ಸಂಕುಚಿತ ಮನೋಭಾವದಿಂದ ಮತ್ತು ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡಲು ದೇಶ ಭಕ್ತರ ಪಾಠಗಳನ್ನು ತೆಗೆಯಲು ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಸಮಾಜದ ಶಾಂತಿ ಕದಡುವ ತೀರ್ಮಾನ ತೆಗೆದುಕೊಳ್ಳುವ ಬದಲು ಉತ್ತಮ ಆಡಳಿತ ನೀಡಿ ಎಂದರು. ಪ್ರತಿಭಟನೆಯಲ್ಲಿ ಬಾಲಸುಬ್ರಹ್ಮಣ್ಯಂ, ಶಂಕರ್, ಎಂ.ರಮೇಶ್‌ನಾಯಕ, ನೂತನ್, ರಾಜ, ಗುರುಮೂರ್ತಿ, ಮನು, ವಿನೋದ್‌ರಾಜ್, ರಂಗಸ್ವಾಮಿ, ಸುಭಾಷ್, ಸಿದ್ದ, ಸಂತೋಷ್ ಮತ್ತು ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net