ಚುನಾವಣೆಯಲ್ಲಿ ನನಗೊಂದು ಅವಕಾಶಕೊಡಿ

22 CHN01- RAJU PRESS MET (2)
Published on

ಚಾಮರಾಜನಗರ: ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದು, ವರಿಷ್ಟರು ಟಿಕೆಟ್ ನೀಡಿದರೆ ಖಂಡಿತ ಈ ಕ್ಷೇತ್ರದಿಂದ ಮತ್ತೇ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಆರ್.ರಾಜು ತಿಳಿಸಿದರು.

ಕಳೆದ ಬಾರಿಯೇ ನಾನು ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದ ಪ್ರವಾಸ ಮಾಡಿದ್ದೆ, ಮತದಾರರು ಹಾಗೂ ಬಿಜೆಪಿ ಹಿರಿಯ ಮುಖಂಡರು, ವರಿಷ್ಠರು ಟಿಕೆಟ್ ನೀಡಲು ಉತ್ಸಾಹ ಹೊಂದಿದ್ದರು. ಹಿರಿಯರಾದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಅಂತಿಮವಾಗಿ ಟಿಕೆಟ್ ಘೋಷಣೆಯಾದ ಬಳಿಕ ನಾನು ಸೇರಿದಂತೆ ಎಲ್ಲ ಮುಖಂಡರು ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡಿದೆವು. 2024 ರ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ವಿ.ಶ್ರೀನಿವಾಸಪ್ರಸಾದ್ ಅವರೇ ನಿವೃತ್ತಿ ಘೋಷಣೆ ಮಾಡಿದ್ದಾರೆ, ಹೀಗಾಗಿ ಈ ಬಾರಿ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ಬಿಜೆಪಿ ಪ್ರಮುಖ ಮುಖಂಡರು ಹಾಗೂ ಪದಾಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ವಿವಿಧ ಸಮುದಾಯಗಳ ಮಠಾಧಿಪತಿಗಳು, ಧರ್ಮ ಗುರುಗಳನ್ನು ಭೇಟಿ ಮಾಡಿ ಆರ್ಶೀವಾದ ಪಡೆದಿದ್ದು, ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಟರಲ್ಲಿಯು ಮನವಿ ಮಾಡಿದ್ದೇನೆ. ಅವರು ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ಸೂಚನೆ ಕೊಟ್ಟಿದ್ದಾರೆ. ಅದರಂತೆ ಕ್ಷೇತ್ರ ಪ್ರವಾಸದಲ್ಲಿದ್ದು, ಜನರೂ ಸಹ ಅನುಭವಿಗಳು ಹಾಗೂ ವಿಚಾರವಂತರು ಲೋಕಸಭೆಗೆ ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ದಿ ಆಗುತ್ತದೆ ಎಂಬ ವಿಶ್ವಾಸದ ಮಾತುಗಳಾಡುತ್ತಿದ್ದಾರೆ ಎಂದು ಹೇಳಿದರು.

ನನ್ನ 35 ವರ್ಷಗಳ ಸೇವೆ ಪೈಕಿ 16 ವರ್ಷಗಳ ಕಾಲ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಅಲ್ಲದೇ ಪ್ರಮುಖವಾದ ನಿರ್ಧಾರಗಳನ್ನು ಮಾಡಿ, ಅರಣ್ಯ ಸಂಪತ್ತು ಹೆಚ್ಚಳ, ಕಳ್ಳಬೇಟೆ ತಡೆ ಹಾಗೂ ಹುಲಿ ಯೋಜನೆ ಜಾರಿಗೆ ಪ್ರಮುಖ ಕಾರಣಕರ್ತನಾಗಿದ್ದೇವೆ. ಅಂದು ನಾನು ಮಾಡಿದ ಹುಲಿ ಗಣತಿ ಪರಿಣಾಮ 29 ಹುಲಿಗಳು ಪತ್ತೆಯಾಗಿದ್ದವು. ಈಗ ಅದರ ಪ್ರಮಾಣ ಆಂದಾಜು 190 ಹುಲಿಗಳು ಇವೆ. ಇದು ಸಹ ನನ್ನ ಕೊಡುಗೆಯಾಗಿದೆ. ಆದೇ ರೀತಿ ಜನ ಸೇವೆ ಮತ್ತು ಸಮಾಜ ಸೇವೆ ಮಾಡಬೇಕೆಂಬ ಆಕಾಂಕ್ಷೆ ಹೊಂದಿದ್ದು, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು.

ಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‌ನಾಯಕ, ಮಾಜಿ ಸದಸ್ಯ ಬಸವರಾಜು, ಮುಖಂಡರಾದ ವಿ.ಶ್ರೀನಿವಾಸಪ್ರಸಾದ್, ಮಾಲಂಗಿ ಮೂರ್ತಿ, ತೊರವಳ್ಳಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net