

ಚಾಮರಾಜನಗರ: ದೇಶದಲ್ಲೇ ಎಚ್‌ಐವಿ, ಏಡ್ಸ್ ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ಹಲವಾರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರಂ ತಿಳಿಸಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆಧಾರಿತ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಸಮುದಾಯ ಆಧಾರಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರಂಭಿಕ ರೋಗ ನಿರ್ಣಯವನ್ನು ಸುಧಾರಿಸಲು, ಮೊದಲ ಬಾರಿಗೆ ಪರೀಕ್ಷಕರನ್ನು ತಲುಪಲು ಮತ್ತು ವೈದ್ಯಕೀಯ ಸೇವೆಗಳನ್ನು ವಿರಳವಾಗಿ ಬಳಸುವ ಜನರನ್ನು ತಲುಪಲು ಸ್ಕ್ರೀನಿಂಗ್ ಒಂದು ಪ್ರಮುಖ ವಿಧಾನವಾಗಿದೆ. ಇದರಲ್ಲಿ ಪುರುಷರು ಮತ್ತು ಹದಿಹರೆಯದವರಿಗೆ ಹೆಚ್ಚು ಹರಡಬಹುದಾದ ಅಪಾಯದ ಗುಂಪುಗಳ ಎಚ್‌ಐವಿ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಸೇವೆಗಳ ಪಡೆಯುವಿಕೆ ವ್ಯಾಪ್ತಿಯನ್ನು ಸುಧಾರಿಸಲು ಮತ್ತು ಪರಿಶೀಲಿಸಲು ವಿವಿಧ ವಿಧಾನಗಳ ಮೂಲಕ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ದೇಶದಲ್ಲಿ ಎಚ್‌ಐವಿ ಸೋಂಕು ಸಂಪೂರ್ಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಸ್ವಯಂಸೇವಾ ಸಂಸ್ಥೆಗಳು ಶ್ರಮಿಸುತ್ತಿದೆ. ಎಚ್‌ಐವಿ ಕಂಡು ಬಂದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಮತ್ತೊಬ್ಬರಿಗೆ ಹರಡದಂತೆ ಜಾಗೃತ ವಹಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್, ಡಾ. ಉಮಾರಾಣಿ, ಕಾರ್ಮಿಕ ಅಧಿಕಾರಿ ರಶ್ಮಿ, ಮೇಲ್ವಿಚಾರಕ ಮಹಾದೇವ ಪ್ರಸಾದ್, ಆಪ್ತ ಸಮಾಲೋಚಕಿ ಲತಾ ಕುಮಾರಿ, ಪ್ರಯೋಗ ಶಾಲಾ ತಂತ್ರಜ್ಞ ಅಜಿತ್ ಸಾಜಿದ್, ಚಂದ್ರಶೇಖರ ಪಾಟೀಲ್, ಕೂರ್ಗ್ ಸಂಸ್ಥೆಯ ಮಂಜಪ್ಪ, ಸಮತ ಸೊಸೈಟಿಯ ದೊರೆಸ್ವಾಮಿ, ದಶರಥ್, ವ್ಯವಸ್ಥಾಪಕ ಕುಮಾರ್ ನಾಯಕ್ ಹಾಜರಿದ್ದರು.