

ಬೇಗೂರು:ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಬಗ್ಗೆ ಮಕ್ಕಳಲ್ಲಿ ಆತಂಕ ಇರುತ್ತದೆ. ಆಗಾಗಿ ಶಿಕ್ಷಕರು ಮಕ್ಕಳಿಗೆ ಸರಳವಾಗಿ ಬೋಧಿಸಿ ಮನನ ಮಾಡಿಸಬೇಕು ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು.
ಬೇಗೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ಎಸ್‌ಎಸ್‌ಎಲ್‌ಸಿ
ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರಿಗಾಗಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ವಿಷಯ ಸಮುದ್ರವಿದ್ದಂತೆ, ನಾವು ಎಷ್ಟೇ ಕಲಿತರೂ ಅದರ ಆಳ ಇನ್ನೂ ವಿಶಾಲವಾಗಿದೆ. ಅಲ್ಲದೆ ಹೆಚ್ಚು ಪ್ರಯೋಗಾತ್ಮಕತೆಯನ್ನೂ ಒಳಗೊಂಡಿದೆ. ಈ ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಶಿಕ್ಷಕರು ಮಕ್ಕಳೊಂದಿಗೆ ಹಂಚಿಕೊಂಡು ಉತ್ತಮ ಯೋಜನೆಯನ್ನು ತಯಾರಿಸಿ ಹೆಚ್ಚಿನ ಅಂಕ ಗಳಿಸುವಂತೆ ತಯಾರು ಮಾಡಬೇಕು ಎಂದು ಕಿವಿಮಾತು ಹೇಳಿದರು.
ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಬಗ್ಗೆ ಮಕ್ಕಳಲ್ಲಿ ಆತಂಕ ಇರುತ್ತದೆ. ಶಿಕ್ಷಕರು ಮಕ್ಕಳಿಗೆ ಸರಳವಾಗಿ ಈ ವಿಷಯಗಳನ್ನು ಬೋಧಿಸಿ ಮನನ ಮಾಡಿಸಬೇಕು. ವಿಜ್ಞಾನದಲ್ಲಿ ಶೇ.100 ಅಂಕ ಪಡೆಯಲು ಅವಕಾಶ ಇರುತ್ತದೆ. ಪ್ರಾಯೋಗಿಕ ಬೋಧನೆ ಬಹಳ ಮುಖ್ಯವಾಗಿದೆ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಕಾಳಜಿವಹಿಸಬೇಕು ಎಂದರು.
ಕಾರ್ಯಾಗಾರಗಳು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಪೂರಕವಾಗಿದ್ದು, ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸಹಕಾರಿ ಯಾಗುತ್ತದೆ. ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆದು ಭವಿಷ್ಯದಲ್ಲಿ ಉದ್ಯೋಗ ಸಂಪಾದಿಸಿ ನೆಮ್ಮದಿಯ ಜೀವನ ನಡೆಸುವಂತೆ ಮಾರ್ಗದರ್ಶನ ನೀಡಿ. ತಾಲೂಕಿನ ಶೈಕ್ಷಣಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಮ್.ಗುರುಪ್ರಸಾದ್, ವಸತಿ ಶಾಲೆಯ ಪ್ರಾಂಶುಪಾಲ ಮಹೇಂದ್ರ, ಶಿಕ್ಷಕ ಸಿದ್ದಮಲ್ಲಪ್ಪ, ಶಿವಕುಮಾರಸ್ವಾಮಿ, ನಿಲಯ ಪಾಲಕ ಎಚ್.ಎನ್.ಮಂಜುನಾಥ್, ಸಂಪನ್ಮೂಲ ವ್ಯಕ್ತಿಗಳಾದ ಷಡಕ್ಷರಿ, ಲಕ್ಷ್ಮಿ, ಜಯಶಂಕರ್, ಮುಖಂಡ ಹೊರೆಯಾಲ ನೀಲಕಂಠಪ್ಪ, ಹಾಲಹಳ್ಳಿ ಬಸವರಾಜು, ಶರತ್ ಹಾಗೂ ಇತರರು ಭಾಗವಹಿಸಿದ್ದರು.