

ಚಾಮರಾಜನಗರ: ಕ್ರಿಯಾಶೀಲತೆಯನ್ನು ಹೆಚ್ಚಿಸಲು ಪತ್ರಿಕೆಮಾಧ್ಯಮದಿಂದ ಮಾತ್ರ ಸಾಧ್ಯವಿದ್ದು, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಸಾಹಿತಿ ನವಮಿ ಬಂಡಿಗೆರೆ ಸಲಹೆ ನೀಡಿದರು.
ನಗರದ ಸರ್ಕಾರಿ ಆದರ್ಶ ವಿದ್ಯಾಲಯಲ್ಲಿ ಜೆ.ಎಸ್.ಬಿ ಪ್ರತಿಷ್ಠಾನದ ವತಿಯಿಂದ ಬುಧವಾರ ಆಯೋಜಿಸಿದ್ದ ’ಕನ್ನಡ ಮಾಸಾಚರಣೆ-2023’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಯುವಸಮುದಾಯದಲ್ಲಿ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ದಶ್ಯ ಮಾದ್ಯಮಗಳ ವೀಕ್ಷಣೆ ಹೆಚ್ಚುತ್ತಿದೆ, ಆದರೆ ದೃಶ್ಯ ಮಾಧ್ಯಮ ನಮ್ಮ ಕಲ್ಪನೆಗಳನ್ನು ಬೆಳೆಸುವುದಿಲ್ಲ,
ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಪತ್ರಿಕಾ ಮಾಧ್ಯಮದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಿಂದಲೇ ಪತ್ರಿಕೆಯನ್ನು ಓದಲು ಪ್ರಾರಂಭಿಸಿದರೆ, ನಮ್ಮಲ್ಲಿ ಧೈರ್ಯ ಹಾಗೂ ಅನುಭವ ಹೆಚ್ಚಾಗುತ್ತದೆ. ಮನುಷ್ಯ ಬೆಳೆಯುವುದು ಕ್ರಿಯೆ-ಪ್ರತಿಕ್ರಿಯೆ ಮೂಲಕ.ದೃಶ್ಯ ಮಾಧ್ಯಮಗಳು ಬಂದ ಮೇಲೆ ಜನರ ಕಲ್ಪನೆ ಸಾಯುತ್ತಿದೆ. ಕೆಲವು ಕೆಟ್ಟ ಸಂಪ್ರದಾಯಗಳನ್ನು ಅವು ಹುಟ್ಟು ಹಾಕುತ್ತಿವೆ. ಆದರೆ ಪತ್ರಿಕಾ ಮಾಧ್ಯಮ ಬೌದ್ಧಿಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.
ಶಿಕ್ಷಕ ಅರ್ಕಪ್ಪ ಮಾತನಾಡಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸುಧಾರಣೆಗೆ ಕಾರಣವಾಗುವ ಪತ್ರಿಕಾರಂಗವು ಸಮಾಜಕ್ಕೆ ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ಇಲ್ಲದಿದ್ದಲ್ಲಿ ಪ್ರಜಾಪ್ರಭುತ್ವವೇ ಇರುತ್ತಿರಲಿಲ್ಲ. ಸಮಾಜದ ಕುಂದುಕೊರತೆಗಳನ್ನು ಸರ್ಕಾರಕ್ಕೆ ತಲುಪಿಸುವಲ್ಲಿ, ಸರ್ಕಾರದ ಕಣ್ಣುತೆರೆಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಎಸ್.ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಶಶಿಕುಮಾರ್, ಶಿಕ್ಷಕರಾದ ಲಿಂಗರಾಜು, ಶಾಲಿನಿ, ಮಂಜುನಾಥ, ಲೀಲಾ, ಸುರೇಶ, ಬಸವಣ್ಣ, ಶಿವಕುಮಾರ, ಮಂಜುನಾಥಸ್ವಾಮಿ, ಸಂತೋಷ, ಆಸಿಯಾ, ಬಸವರಾಜು ಹಾಗೂ ಇತರರು ಹಾಜರಿದ್ದರು.