ನ.24 ರಿಂದ ಸೇವಾ ಭಾರತಿ 37 ನೇ ವಾರ್ಷಿಕೋತ್ಸವ

Vasudevrao
Published on

ಚಾಮರಾಜನಗರ: ನಗರದ ಸೇವಾಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ ನ.24,25 ಹಾಗೂ 26 ರಂದು ಮೂರು ದಿನಗಳ ಕಾಲ ಶಶಿ ಸೌರಭ -2023 ಹಾಗೂ 37ನೇ ಶಾಲಾ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೇವಾಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಾಸುದೇವರಾವ್ ಮಾಹಿತಿ ನೀಡಿದರು.

ನಗರದ ಚೆನ್ನಿಪುರದ ಮೋಳೆ ರಸ್ತೆಯಲ್ಲಿರುವ ಸೇವಾಭಾರತಿ ಕಾಲೇಜು ಆವರಣದಲ್ಲಿ ನ.24 ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀ ಮುಕ್ತಿದಾನಂದ ಮಹಾರಾಜ್ ವಹಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಮ.ವೆಂಕಟರಾಮು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೋನಾ ಹಿನ್ನೆಲೆಯಲ್ಲಿ ಕಳೆದ 4 ವರ್ಷಗಳಿಂದಲೂ ಶಾಲಾ ವಾರ್ಷಿಕೋತ್ಸವ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಪೋಷಕರ ಸಹಕಾರದೊಂದಿಗೆ ಈ ಬಾರಿ ವಿಜೃಂಭಣೆಯಿಂದ ವಾರ್ಷಿಕೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಅದರಂತೆ ನ.25 ಹಾಗೂ 26 ರಂದು ಸಹ ವೇದಿಕೆ ಕಾರ್ಯಕ್ರಮ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಮೂರು ದಿನಗಳ ಕಾರ್ಯಕ್ರಮಗಳು ಸಂಜೆ 5 ರಿಂದ ಪ್ರಾರಂಭವಾಗಲಿದ್ದು, ಸೇವಾಭಾರತಿ ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಹೊನಲು ಬೆಳಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಸ ಕ್ರೀಡೆ ಸೇರಿದಂತೆ ಶಾರೀರಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಸೇವಾಭಾರತಿ ಶಿಕ್ಷಣ ಸಂಸ್ಥೆಯು ಶಿಕ್ಷಣ, ಸಂಸ್ಕಾರ,ಸೇವೆ, ರಾಷ್ಟ್ರೀಯತೆ ಎಂಬ ಮಹೋನ್ನತ ಉದ್ದೇಶವನ್ನು ಇಟ್ಟುಕೊಂಡು ದಿ.ವೆಂಕಟಸುಬ್ಬಮ್ಮ ಸಹಕಾರದಿಂದ 1986ರಂದು ಪ್ರಾರಂಭವಾಯಿತು. ಕಳೆದ 37 ವರ್ಷಗಳಿಂದಲೂ ಶಿಕ್ಷಣ ನೀಡುತ್ತಾ ಬಂದಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಸಂಸ್ಥೆಯು ಇಂದು ಜಿಲ್ಲೆಯಲ್ಲೇ ಒಂದು ಉತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ. ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದು, ನಗರದ ಕೋರ್ಟ್ ರಸ್ತೆಯಲ್ಲಿ ಅನಾಥ ಮಕ್ಕಳಿಗಾಗಿಯೇ ಪಾರ್ವತಿ ಬಾಲಾಶ್ರಮ ತೆರೆಯಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸೇವಾಭಾರತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ರಮೇಶ್, ಸದಸ್ಯ ಬಾಲಸುಬ್ರಹ್ಮಣ್ಯಂ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net