ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

08raju5
Published on

ಚಾಮರಾಜನಗರ : ಮನುಷ್ಯನ ಆರೋಗ್ಯಪೂರ್ಣ ಜೀವನಕ್ಕಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಮರಿಯಾಲ ಮಠಾಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮುಂಭಾಗ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ 50 ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ನಗರದಾದ್ಯಂತ ಸಸಿಗಳನ್ನು ನೆಟ್ಟು ಪೋಷಿಸುವಂತಹ ಕೆಲಸವನ್ನು ಸಿ.ಎಂ.ವೆಂಕಟೇಶ್ ಸತತ 7 ವರ್ಷಗಳಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ನಾವೆಲ್ಲರೂ ಕಾಡನ್ನು ಉಳಿಸಬೇಕು, ಬೆಳೆಸಬೇಕು. ಪರಿಸರದ ಸಂರಕ್ಷಣೆಯನ್ನು ಮಾಡಬೇಕು. ಆ ಮೂಲಕ ಆರೋಗ್ಯಪೂರ್ಣ ಜೀವನವನ್ನು ಮನುಷ್ಯ ಪಡೆದುಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ಮನೆಗೊಂದು ಸಸಿ, ಊರಿಗೊಂದು ವನ ಎಂಬ ನಾಣ್ನುಡಿಯನ್ನು ನಾವೆಲ್ಲರೂ ಪಾಲಿಸಬೇಕು. ಅತ್ಯಂತ ಶ್ರದ್ಧೆಯಿಂದ ಈ ಪುಣ್ಯದ ಕೆಲಸವನ್ನು ಈಶ್ವರಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್ ಮಾಡಿಕೊಂಡು ಬರುತ್ತಿದ್ದಾರೆ. ನಮಗೆ ಉಸಿರು ಇದೆ ಅಂದರೆ ಹಸಿರನ್ನು ಕಾಪಾಡಿದರೆ ಮಾತ್ರ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಕೂಡಿದಾಗ ನಾವು ಕೂಡ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಮುಂದಿನ ತಲೆಮಾರಿಗೆ ನಾವು ಉತ್ತಮವಾದ ವಾತಾವರಣವನ್ನು ಉಳಿಸಿಹೋಗಬೇಕಿದೆ ಎಂದು ತಿಳಿಸಿದರು.

ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ದಾನೇಶ್ವರಿಜೀ ಮಾತನಾಡಿ, ಚಾ.ನಗರ ಇಷ್ಟೊಂದು ಸುಂದರವಾಗಿ ಕಾಣುತ್ತಿದೆ ಅಂದರೆ ವೆಂಕಟೇಶ್ ಅಂಥವರ ಪರಿಸರದ ಕಾಳಜಿಯಿಂದ ಅಂದರೆ ತಪ್ಪಾಗಲಾರದು. ಮನುಷ್ಯ ಬದುಕಲು ಪರಿಸರ ಅಗತ್ಯವಾಗಿ ಬೇಕಾಗಿದೆ. ನಾವೆಲ್ಲರೂ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕಿದೆ. ಇಂದು ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಅಕಾಲಿಕ ಮಳೆಯಾಗುತ್ತಿದೆ. ಮರಗಳನ್ನು ಕಡಿಯುತ್ತಿರುವುದೇ ಇದಕ್ಕೆ ನೇರ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮರಗಳನ್ನು ಬೆಳೆಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಈಶ್ವರಿ ಸೋಷಿಯಲ್ ಟ್ರಸ್ಟ್ ಅಧ್ಯಕ್ಷ ಸಿ.ಎಂ.ವೆಂಕಟೇಶ್, ನಾಟಿ ವೈದ್ಯ ಎಸ್.ರಾಮಶೆಟ್ಟಿ, ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ನಂಜುಂಡಸ್ವಾಮಿ, ಬಿ.ಕೆ.ಆರಾಧ್ಯ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net