ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಪ್ರಾಬ್ಲಂ

16chn4
Published on

ಚಾಮರಾಜನಗರ: ಜಿಲ್ಲಾ ಕೇಂದ್ರವಾಗಿರುವ ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ.

ಬಸ್ ನಿಲ್ದಾಣದ ಮುಂಭಾಗ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಇದ್ದು, ಇದರ ಎದುರಿನ ಅರ್ಧಭಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಅವಕಾಶವಿದೆ. ಟೆಂಡರ್ ಪಡೆದಿರುವವರು ವಾಹನಗಳಿಗೆ ಗಂಟೆಗೆ ಇಂತಿಷ್ಟು ಶುಲ್ಕ ಪಡೆದುಕೊಳ್ಳುತ್ತಿದ್ದಾರೆ. ಇರುವಷ್ಟು ಕಿಷ್ಕಿಂದೆಯಷ್ಟು ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕಚೇರಿ ಎದುರು ಸಾರ್ವಜನಿಕರ ವಾಹನಗಳ ನಿಲುಗಡೆ ಅವಕಾಶವಿಲ್ಲ. ಸ್ಟಾೃಂಡ್‌ನಲ್ಲಿ ಜಾಗದ ಕೊರತೆ ಇರುವುದರಿಂದ ಹೆಚ್ಚು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳುವ ಬಸ್‌ಗಳು ನಿಲ್ಲುವ ಸ್ಥಳದಲ್ಲೂ ಬೈಕ್‌ಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ಪ್ರವೇಶಕ್ಕೆ ಅನುಮತಿ ಇಲ್ಲ. ಆದರೆ ಬೈಕ್‌ಗಳ ಪಾರ್ಕಿಂಗ್‌ಗೆ ಸ್ಟಾೃಂಡ್‌ನಲ್ಲಿ ಜಾಗವಿಲ್ಲದ ಕಾರಣ ಕೆಲವರು ಬಸ್ ನಿಲ್ದಾಣದ ಒಳಗಿನ ್ಲ್ಯಾಟ್ ಾರ್ಮ್‌ನಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ನಿಲ್ದಾಣದಲ್ಲಿ ಸಾರ್ವಜನಿಕ ಶೌಚಗೃಹದ ಸಮೀಪದ ್ಲ್ಯಾಟ್ ಾರ್ಮ್‌ನ ಬಳಿ ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇನ್ನು ಗುಂಡ್ಲುಪೇಟೆಗೆ ಬಸ್ ಹತ್ತುವ ಜಾಗದಲ್ಲೂ ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಮತ್ತು ಬಸ್‌ಗಾಗಿ ಕಾಯುವ ಪ್ರಯಾಣಿಕರಿಗಾಗಿ ಆಸನ ವ್ಯವಸ್ಥೆ ಕಲ್ಪಿಸಿರುವ ಜಾಗದ ಪಕ್ಕದಲ್ಲೇ ದ್ವಿಚಕ್ರವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅಂಗವಿಕಲರು ಓಡಾಡಲು ಬಿಟ್ಟಿರುವ ದಾರಿಯಲ್ಲಿ ಅಡ್ಡಲಾಗಿ ಬೈಕ್‌ಗಳು ನಿಲ್ಲುತ್ತಿವೆ.

ಪ್ರಯಾಣಿಕರಿಗೆ ಕಿರಿಕಿರಿ:
ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಬೈಕ್‌ಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಪಾರ್ಕಿಂಗ್ ಸ್ಟಾೃಂಡ್‌ನಲ್ಲಿ ಜಾಗದ ಕೊರತೆ ಇರುವ ಕಾರಣಕ್ಕೆ ಜನರು ಬಸ್ ಹತ್ತುವ ಸ್ಥಳಗಳಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಿರುವುದು ಸಮಸ್ಯೆಯುಂಟು ಮಾಡುತ್ತಿದೆ. ಚಾಮರಾಜನಗರದ ಬಸ್ ನಿಲ್ದಾಣದಿಂದ ಪ್ರತಿದಿನ ಮೈಸೂರಿಗೆ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಮೈಸೂರಿನಲ್ಲಿ ಉದ್ಯೋಗ ಮಾಡುತ್ತಿರುವವರು ಬೆಳಗ್ಗೆ ಬಸ್ ಹತ್ತಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗುವ ಧಾವಂತದಲ್ಲಿರುತ್ತಾರೆ. ಹಾಗೆಯೇ ಮೈಸೂರಿನಿಂದ ಚಾಮರಾಜನಗರಕ್ಕೆ ಕೆಲಸಕ್ಕೆ ಬರುವವರು ಸಂಜೆ ವೇಳೆ ಬಸ್‌ಗಳಿಗಾಗಿ ಕಾಯುತ್ತಾ ನಿಲ್ಲುತ್ತಾರೆ. ಈ ವೇಳೆ ದ್ವಿಚಕ್ರ ವಾಹನಗಳ ಅಡ್ಡದಿಡ್ಡಿ ಪಾರ್ಕಿಂಗ್‌ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಪಾರ್ಕಿಂಗ್‌ಗೆ ಸ್ಥಳಾವಕಾಶವಿಲ್ಲದ ಕಾರಣ ಪರದಾಡುವ ವಾಹನ ಸವಾರರು ಬಸ್ ಹತ್ತುವುದಕ್ಕಾಗಿ ಬಂದು ಹಿಂದಿರುಗಿ ಮನೆಗೆ ಹೋಗಿ, ಅಲ್ಲಿಂದ ಆಟೋದಲ್ಲಿ ಬಸ್ ನಿಲ್ದಾಣಕ್ಕೆ ಹಿಂದಿರುಗಿರುವ ಉದಾಹರಣೆಗಳೂ ಇವೆ.

ಸಮಸ್ಯೆ ಬಗೆಹರಿಯೋದ್ಯಾವಾಗ?
ಚಾಮರಾಜನಗರದ ಸಂತೇಮರಹಳ್ಳಿ ರಸ್ತೆಯ ಬಳಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗುವವರೆಗೂ ಪಾರ್ಕಿಂಗ್ ಸಮಸ್ಯೆ ಬಗೆಹರಿಯುವುದಿಲ್ಲ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹೇಳುವ ಪ್ರಕಾರ, ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ 32 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿಕೊಡಲಾಗಿದೆ. ಅನುದಾನ ಬಂದ ಬಳಿಕ ಬಸ್ ನಿಲ್ದಾಣ ಕಾಮಗಾರಿ ಶುರುವಾಗಲಿದೆ ಎಂದು ವಿಜಯವಾಣಿಗೆ ತಿಳಿಸಿದ್ದಾರೆ.

ಚಾಮರಾಜನಗರದ ಬಸ್ ನಿಲ್ದಾಣದ ವಿಸ್ತೀರ್ಣ ಚಿಕ್ಕದಾಗಿದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ಜಾಗವಿಲ್ಲ. ನಮ್ಮ ಕಚೇರಿ ಮುಂದೆ ಸಾರ್ವಜನಿಕರ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದೇವೆ.-ಅಶೋಕ್‌ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬೈಕ್‌ಗಳ ಪಾರ್ಕಿಂಗ್‌ಗೆ ತಾತ್ಕಾಲಿಕ ಸೌಲಭ್ಯ ಕಲ್ಪಿಸಬೇಕು. ಹೊಸ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿ ಪೂರ್ಣಗೊಳ್ಳುವವರೆಗೂ ಪಾರ್ಕಿಂಗ್ ಸಮಸ್ಯೆಯಾಗಬಾರದು.-ಮಹೇಂದ್ರ, ಇರಸವಾಡಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net