

ಚಾಮರಾಜನಗರ: ತೀವ್ರತರ ಅತಿಸಾರ ಬೇದಿಯಿಂದ ಬಳಲುತ್ತಿರುವ ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದ ಮಕ್ಕಳಿಗೆ ಒ.ಆರ್.ಎಸ್ ಪ್ಯಾಕೆಟ್ ಮತ್ತು ಜಿಂಕ್ ಮಾತ್ರೆಯನ್ನು ನೀಡಿ ಬೇದಿಯನ್ನು ತಡೆಗಟ್ಟಿ ಕಾಯಿಲೆಗಳು ಬಾರದ ಹಾಗೆ ನೋಡಿಕೊಳ್ಳುವುದು ಅತಿ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಹೇಳಿದರು.
ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಹಯೋಗದಲ್ಲಿ 2023-24 ನೇ ಸಾಲಿನ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ, ನವಜಾತ ಶಿಶು ಸಪ್ತಾಹ ಹಾಗೂ ನಿಮೋನಿಯಾ ತಡೆಗಟ್ಟುವ ಅರಿವು ಕುರಿತು ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲುಷಿತ ನೀರಿನಿಂದ ಅತಿಸಾರ ಬೇದಿ ಉಂಟಾಗುತ್ತದೆ. ಅತಿಸಾರ ಬೇದಿಯಿಂದ ಲವಣಾಂಶಗಳು ಶರೀರದಿಂದ ಹೊರಹೊಗಿ ದೇಹ ನಿತ್ರಾಣ ಸ್ಥಿತಿಯನ್ನು ತಲುಪುತ್ತದೆ. ಆಗ ಸುಸ್ತು, ನೀರಡಿಕೆಯಾಗುತ್ತದೆ. ಚಿಕ್ಕ ವಯಸ್ಸಿನಿಂದ ಮಕ್ಕಳಲ್ಲಿ ಸೋಪಿನಿಂದ ಕನಿಷ್ಠ 30 ಸೆಕೆಂಡಿನಲ್ಲಿ ನೀರಿನಲ್ಲಿ ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಮಕ್ಕಳಿಗೆ ಹೊರಗಡೆ ದೊರಕುವ ಆಹಾರ ಕೊಡಿಸಬಾರದು ಎಂದು ತಿಳಿಸಿದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಎಂ.ಮಂಜುನಾಥ್ ಮಾತನಾಡಿ, ಜಿಂಕ್ ಮಾತ್ರೆಯು ಮಕ್ಕಳ ಕರುಳಿನ ಸೋಂಕಿನಿಂದ ಉಂಟಾಗುವ ಕರುಳಿನ ತೊಂದರೆಯನ್ನು ತಡೆಗಟ್ಟುತ್ತದೆ ಎಂದರು.
ಇದೇ ವೇಳೆ ಅತಿಸಾರ ಭೇದಿ ಪಾಕ್ಷಿಕದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಒ.ಆರ್.ಎಸ್ ದ್ರಾವಣ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತಾಯಂದಿಯರಿಗೆ ನೀಡಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮಾರಾಣಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದುಶ್ಯಂತ್, ಜಿಲ್ಲಾ ಶುಶ್ರೂಷಣಾಧಿಕಾರಿ ಶಾಂತಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮೀನಾಕ್ಷಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಪ್ರಸಾದ್, ವ್ಯವಸ್ಥಾಪಕಿ ರಶ್ಮಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.