ಎಲ್ಲೆಯೊಳಗಿನ ಭಾಷೆ ಅಸ್ತಿತ್ವದಲ್ಲಿರಬೇಕು

16chn11
Published on

ಚಾಮರಾಜನಗರ: ನಮ್ಮ ಕನ್ನಡ ಭಾಷೆಯು ಭಾರತದ 22 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ ಎಂದು ಲೇಖಕಿ ಶಿವಮ್ಮ ತಿಳಿಸಿದರು.

ತಾಲೂಕಿನ ಗೂಳೀಪುರದ ವಿ.ಮಹಾಂತದೇವರು ಸರ್ಕಾರಿ ಪ್ರೌಡಶಾಲೆಯಲ್ಲಿ ಜೆ.ಎಸ್.ಬಿ ಪ್ರತಿಷ್ಠಾನದ ವತಿಯಿಂದ ಗುರುವಾರ ಆಯೋಜಿಸಿದ್ದ ’ಕನ್ನಡ ಮಾಸಾಚರಣೆ-2023’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾಷೆ ಎಂಬುವುದು ಕೇವಲ ಸಂವಹನಕ್ಕಾಗಿ ಅವಶ್ಯವಾದ ಮಾಧ್ಯಮವೇ ಆದರೂ, ವ್ಯಕ್ತಿಯ ಭಾವನೆಗಳು ಹೊರ ಹೊಮ್ಮಲು ಇರುವ ವಾಹಕವೂ ಆಗಿದೆ. ಒಂದು ಬೌಗೋಳಿಕ ಎಲ್ಲೆಯೊಳಗೆ ಜನರು ಹೊಂದಿರುವ ಸಂಸ್ಕೃತಿ ಉಳಿಯ ಬೇಕೆಂದರೆ ಆ ಎಲ್ಲೆಯೊಳಗಿನ ಭಾಷೆ ಅಸ್ತಿತ್ವದಲ್ಲಿರಬೇಕು. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ ಎಂದರು.

ಕನ್ನಡ ಭಾಷೆಯ ಲಿಪಿಯು ಸುಮಾರು 2000 ವರ್ಷಗಳಿಗಿಂತಲೂ ಹಳೆಯದಾಗಿದೆ. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊದಮೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ತಿಳಿಸಿದರು.

ಶಿಕ್ಷಕ ನಾಗೇಶ್ ಮಾತನಾಡಿ, ಸರಿಸುಮಾರು ಎರಡೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿರುವ ಕನ್ನಡ ನಾಡನ್ನು ಶಾತವಾಹನರು, ಗಂಗರು, ಕದಂಬರು, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಮುಂತಾದ ರಾಜವಂಶದವರು ಆಳಿದ್ದಾರೆ. ಬೇಲೂರು-ಹಳೆಬೀಡು, ಬದಾಮಿ-ಪಟ್ಟದಕಲ್ಲು, ಐಹೊಳೆ ಹಂಪಿ ಮುಂತಾದ ಸ್ಥಳಗಳು ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಗೆ ಸಾಕ್ಷಿಯಾಗಿವೆ ಎಂದರು.

ಜೆ.ಎಸ್.ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ್, ಶಿಕ್ಷಕರಾದ ಶ್ರೀನಿವಾಸ್, ಹೇಮಚಂದ್ರ, ಭೂಮಿಕ, ಸುನಂದ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net