ಬಹುಮುಖ ಪ್ರತಿಭೆ ರಾಜಗುರು

16chn8
Published on

ಚಾಮರಾಜನಗರ: ರಂಗಭೂಮಿ, ಸಿನಿಮಾ, ಜಾನಪದ ಕ್ಷೇತ್ರದಲ್ಲಿ ಹೆಸರು ಮಾಡುವುದರ ಜತೆಗೆ ಕರಾಟೆಯನ್ನು ಕರಗತ ಮಾಡಿಕೊಂಡಿರುವ ಗಡಿನಾಡಿನ ಪ್ರತಿಭೆ ರಾಜಗುರು ನಾಗೇಂದ್ರ ಕಲಾಕ್ಷೇತ್ರದಲ್ಲಿ ಗಮನಸೆಳೆಯುತ್ತಿದ್ದಾರೆ.

ತಾಲೂಕಿನ ಹೆಗ್ಗವಾಡಿ ಗ್ರಾಮದ ಗುರುಮಲ್ಲಯ್ಯ ಹಾಗೂ ರಾಜಮ್ಮ ದಂಪತಿಗಳ ಪುತ್ರನಾದ ರಾಜಗುರು ನಾಗೇಂದ್ರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹೆಗ್ಗವಾಡಿ ಗ್ರಾಮದಲ್ಲೇ ಪಡೆದುಕೊಂಡಿದ್ದಾರೆ. ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದಲ್ಲಿ ನಾಟಕ ವಿಭಾಗದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಸಂಪಾದಿಸಿದ್ದಾರೆ. ಮಧ್ಯಮವರ್ಗದ ಕುಟುಂಬದಿಂದ ಬಂದಿರುವ ಕಲಾವಿದ ರಾಜಗುರು ಚಿಕ್ಕಂದಿನಲ್ಲೇ ಕಲಾ ಕ್ಷೇತ್ರದತ್ತಾ ಆಸಕ್ತಿ ಬೆಳೆಸಿಕೊಂಡರು. 2012 ರಿಂದ ಇಲ್ಲಿಯವರೆಗೂ ರಂಗಭೂಮಿ ಕ್ಷೇತ್ರದಲ್ಲಿ ಸುಧೀರ್ಘ 11 ವರ್ಷಗಳ ಕಾಲ ಸೇವೆಸುತ್ತಿದ್ದಾರೆ. ರಂಗಭೂಮಿಯಲ್ಲಿ ಹತ್ತಾರು ನಾಟಕಗಳಲ್ಲಿ ಅಭಿನಯಿಸಿರುವ ರಾಜಗುರು, ಹಲವಾರು ಕಿರುಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ಅದಲ್ಲದೇ ಇತ್ತೀಚಿನ ಹಲವಾರು ಪ್ರತಿಷ್ಠಿತ ಕನ್ನಡ ಸಿನಿಮಾದಲ್ಲೂ ತೆರೆ ಹಂಚಿಕೊಳ್ಳುವ ಮೂಲಕ ಚಾಮರಾಜನಗರದ ಪ್ರತಿಭೆ ಕಲಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪುಮೂಡಿಸುತ್ತಿದ್ದಾರೆ. ರಾಜಗುರು ಇಷ್ಟಕ್ಕೆ ಸೀಮಿತವಾಗದೇ ಕರಾಟೆಯಲ್ಲೂ ಬ್ಲಾಕ್‌ಬೆಲ್ಟ್ ಪಡೆದುಕೊಂಡಿದ್ದು, ಸರ್ಕಾರಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕರಾಟೆ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. ಗಡಿನಾಡಿನ ಯುವ ಪ್ರತಿಭೆ ರಾಜಗುರು ಕಲಾಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಕೊಡಮಾಡುವ ಕನ್ನಡ ವಿಕಾಸ ರತ್ನ ಪ್ರಶಸ್ತಿಯನ್ನು ನ.30 ರಂದು ಮೈಸೂರಿನ ಕಿರು ರಂಗಮಂದಿರದಲ್ಲಿ ನೀಡಿ ಗೌರವಿಸಲಾಗುತ್ತಿದೆ.

ರಂಗಭೂಮಿಯಲ್ಲಿ ಸೇವೆ:
ಗಡಿನಾಡಿನ ಪ್ರತಿಭೆ ರಾಜಗುರು ನಾಗೇಂದ್ರ ಸುಮಾರು ಹನ್ನೊಂದು ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆಸಲ್ಲಿಸಿದ್ದಾರೆ. ಆರ್ಯದ್ರಾವಿಡ , ಬುದ್ಧನೆಡೆಗೆ , ಎಂಪ್ಲಾಯೀಸ್ , ಬೆರಳ್ಗೇ ಕೊರಳ್, ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತಾದ ಪ್ರಜಾರಾಜ, ಒಂದು ಪ್ರೀತಿಯ ಸುತ್ತ ಹಾಗೂ ಇನ್ನಿತರೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಸಾಮಾಜಿಕ ಮತ್ತು ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದು, ವರದಕ್ಷಿಣೆ, ಸಾಕ್ಷರತೆ, ಪ್ಲಾಸ್ಟಿಕ್‌ಮುಕ್ತ ನಗರ ಹಾಗೂ ಇನ್ನಿತರೆ ವಿಚಾರಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಬಡಕುಟುಂಬದಲ್ಲಿ ಬಂದಿರುವ ರಾಜಗುರು ನಾಗೇಂದ್ರ ತಮ್ಮ ಕಲಾ ಸೇವೆಯ ಜತೆಗೆ ತಂದೆ-ತಾಯಿಯ ಕೃಷಿ ಚಟುವಟಿಕೆಗಳಲ್ಲೂ ಭಾಗಿಯಾಗುವ ಮೂಲಕ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಕಲೆಯ ಬಗ್ಗೆ ಆಸಕ್ತಿ ಹೊಂದಿರದ ಕುಟುಂಬದಲ್ಲಿ ಜನಿಸಿ ಕಲೆಯನ್ನೇ ಬದುಕಾಗಿಸಿಕೊಂಡಿರುವ ರಾಜಗುರು ಕಲಾಕ್ಷೇತ್ರದಲ್ಲೀ ಅನೇಕ ಸಾಧನೆ ಮಾಡುವ ಕನಸು ಕಟ್ಟಿಕೊಂಡಿದ್ದಾರೆ.

ಸಿನಿಮಾ ಕ್ಷೇತ್ರದಲ್ಲೂ ಆಸಕ್ತಿ:
ಬಹುಮುಖ ಪ್ರತಿಭೆ ರಾಜಗುರು ನಾಗೇಂದ್ರ ರಂಗಭೂಮಿಯ ಜತೆಗೆ ಸಿನಿಮಾ ಕ್ಷೇತ್ರದಲ್ಲೂ ಅಪಾರ ಆಸಕ್ತಿ ಹೊಂದಿದ್ದು, ಹಲವಾರು ಚಿತ್ರಗಳಲ್ಲಿ ತೆರೆಹಂಚಿಕೊಳ್ಳುವ ಮೂಲಕ ಗಮನಸೆಳೆಯುತ್ತಿದ್ದಾರೆ.
ರಾಜಗುರು ನಾಗೇಂದ್ರ ‘ಬರ್ಮಾ ಎಕ್ಸ್‌ಪ್ರೆಸ್’ ಎಂಬ ಕಿರುಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದ ಹಲವು ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಸುಮಾರು 14 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅದಲ್ಲದೇ ಪ್ರತಿಷ್ಠಿತ ಕನ್ನಡ ಚಲನಚಿತ್ರಗಳಾದ ತಲೆದಂಡ , ನಿಮ್ದೆ ಕಥೆ, ದರ್ಬಾರ್ ಹಾಗೂ ಕಾಟೇರಾ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮತ್ತಷ್ಟು ಕನ್ನಡ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ರಾಜಗುರು ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಈ ಮೂಲಕ ಚಾಮರಾಜನಗರ ಜಿಲ್ಲೆಯ ಪ್ರತಿಭೆ ಕಲಾಕ್ಷೇತ್ರದಲ್ಲಿ ತನ್ನದೇ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ.

ನಾನು ಬಹಳ ಇಷ್ಟಪಟ್ಟು ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳನ್ನು ಆಯ್ಕೆಮಾಡಿಕೊಂಡಿದ್ದೇನೆ. ಯಾರ ಪ್ರೋತ್ಸಾಹವಿಲ್ಲದೇ ಕಲಾಕ್ಷೇತ್ರದಲ್ಲಿ ಬಂದ ಅವಕಾಶಗಳನ್ನು ಬಳಸಿಕೊಂಡಿದ್ದೇನೆ. ಹಳ್ಳಿಗಾಡಿನ ಪ್ರತಿಭೆಯಾಗಿದ್ದುಕೊಂಡು ಕಲಾಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಕಂಡಿದ್ದೇನೆ.-ರಾಜಗುರು ನಾಗೇಂದ್ರ, ಕಲಾವಿದ, ಹೆಗ್ಗವಾಡಿ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net