

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ಚರ ಉದ್ಯಾನವನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟವಲ್‌ಬೀಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರವುದನ್ನು ಖಂಡಿಸಿ ಕಳೆದ 67 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಕೂಡ ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ಮೌನವಾಗಿದೆ. ಕೇಂದ್ರಸರ್ಕಾರ ಕೂಡಲೇ ಕಾವೇರಿ ನೀರು ನಿರ್ವಹಣಾ ಸಮಿತಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ತಕ್ಷಣವೇ ನಿಲ್ಲಿಸಬೇಕು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು.ತಮಿಳುನಾಡಿಗೆ ನೀರು ನಿಲ್ಲಿಸುವ ತನಕ ಹೋರಾಟ ಮಾಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್, ಗು.ಪುರುಷೋತ್ತಮ್,ರಾಚಪ್ಪ, ಆಲೂರುನಾಗೇಂದ್ರ, ತಾಂಡವಮೂರ್ತಿ, ಚಾ.ಸಿ.ಸಿದ್ದರಾಜು ಇತರರು ಭಾಗವಹಿಸಿದ್ದರು.