

ಹನೂರು: ಕೊಳ್ಳೇಗಾಲದಿಂದ ಹನೂರಿನವರೆಗೆ ಕೆ.ಶಿಪ್ ಯೋಜನೆಯಡಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯು ಕಾಮಗೆರೆ ಗ್ರಾಮದ ಬಳಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದು ಒಂದೆಡೆಯಾದರೆ ಸ್ಥಳೀಯ ನಿವಾಸಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ. ಹಾಗಾಗಿ ಮಹಾ ಶಿವರಾತ್ರಿ, ದೀಪಾವಳಿ, ಯುಗಾದಿ, ಅಮಾವಾಸ್ಯೆ ಸೇರಿದಂತೆ ಇನ್ನಿತರೆ ವಿಶೇಷ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಆದರೆ ಕಳೆದ 5 ವರ್ಷದ ಹಿಂದೆ ಕೊಳ್ಳೇಗಾಲ - ಹನೂರು ಮಾರ್ಗದ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿ ಸಂಪೂರ್ಣ ಹಾಳಾಗಿತ್ತು. ಇದರಿಂದ ವಾಹನ ಸವಾರರು ಸಂಚರಿಸಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಅಲ್ಲದೇ ಆಗ್ಗಾಗ್ಗೆ ಅಪಘಾತಗಳು ಸಂಭವಿಸುತ್ತಿತ್ತು. ಈ ಹಿನ್ನಲೆ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿ ಬಂದಿತ್ತು.
ಈ ಬಗ್ಗೆ ಮನಗಂಡ ಅಂದಿನ ಶಾಸಕ ಆರ್.ನರೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅಂದಿನ ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ 108 ಕೋಟಿ ರೂ ಅನುದಾನವನ್ನು ಬಿಡುಗಡೆಗೊಳಿಸಿದ್ದರು. ಬಳಿಕ 2018, ಜ.10 ರಂದು ಹನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, 5 ವರ್ಷ ಕಳೆದಿದೆ. ಕೋವಿಡ್ ಸಂದರ್ಭದಲ್ಲಿ ಮಾತ್ರ ಕೆಲಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ಆರಂಭವಾದ ಕಾಮಗಾರಿ ಕಾಮಗೆರೆ ಗ್ರಾಮದ ಬಳಿ ಮಂದಗತಿಯಲ್ಲಿ ಸಾಗುತ್ತಿದೆ.
ಈಗಾಗಲೇ ಮಧುವನಹಳ್ಳಿಯಿಂದ ಹನೂರಿನವರೆಗೆ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಹನೂರು ಸಮೀಪದ ಕಾಮಗೆರೆ ಗ್ರಾಮದಲ್ಲಿ ಹೆಚ್ಚು ಅಂಗಡಿ ಮುಂಗಟ್ಟುಗಳನ್ನು ಹೊಂದಿರುವ 2 ಕಡೆಗಳಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಪರಿಣಾಮ ವಾಹನ ಸಂಚಾರದಿಂದ ಇಲ್ಲಿನ ಜನರು ಧೂಳಿನ ಸಿಂಚನವನ್ನು ಅನುಭವಿಸುತ್ತಿರುವುದು ಒಂದೆಡೆಯಾದರೆ ಮಳೆ ಬಂದ ವೇಳೆ ಕಾಮಗಾರಿ ಅಪೂರ್ಣಗೊಂಡಿರುವ ಸ್ಥಳದಲ್ಲಿ ಕೆರೆಯಂತಾಗುವುದರ ಜತೆಗೆ ಕೆಸರುಮಯವಾಗುತ್ತಿದೆ. ಇತ್ತ ಚರಂಡಿ ನೀರು ಅಂಗಡಿ ಮುಂಗಟ್ಟು ಹಾಗೂ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಠಿಸುತ್ತಿದೆ. ಇದರಿಂದ ಸ್ಥಳೀಯರು ತುಂಬಾ ತೊಂದರೆ ಅನುಭವಿಸುತ್ತಿದ್ದರೆ ವಾಹನ ಸಂಚಾರರು ಸಂಚರಿಸಲು ಪಡುಬಾರದ ಕಷ್ಟ ಪಡುತ್ತಿದ್ದಾರೆ.
ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯರು ಸಂಬಂಧಪಟ್ಟವರನ್ನು ಹಲವು ಬಾರಿ ಒತ್ತಾಯಿಸಲಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗಿದ್ದು, ಜನರು ಹೈರಾಣರಾಗಿದ್ದಾರೆ. ಆದ್ದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ತಮ್ಮದೇಯಾದ ಅಭಿಪ್ರಾಯವನ್ನು ಲೌಡ್ ಸ್ಫೀಕರ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
ನಿತ್ಯ ಧೂಳು ಸೇವನೆ
ಕಾಮಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ನಿತ್ಯ ಧೂಳಿನ ಸೇವನೆಯನ್ನು ಅನುಭವಿಸುವಂತಾಗಿದೆ. ಇದರಿಂದ ನೆಗಡಿ, ಕೆಮ್ಮು ಆವರಿಸುತ್ತಿದ್ದು, ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಈ ಹಿಂದೆ ಕೋವಿಡ್ ಮುಂಜಾಗ್ರತೆಗಾಗಿ ಮಾಸ್ಕ್ ಧರಿಸಬೇಕಿತ್ತು. ಆದರೆ ಈಗ ಧೂಳಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕಾದ ಸ್ಥಿತಿ ಮನೆ ಮಾಡಿದೆ. ಇತ್ತ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದ್ದು, ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಗಮನಹರಿಸಬೇಕು.
-ಭರತ್‌ಕುಮಾರ್, ಕಾಮಗೆರೆ, ಹನೂರು
ಮನೆಗಳಿಗೆ ನೀರು ನುಗ್ಗುತ್ತಿದೆ
ಕೆ.ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಕಾಮಗೆರೆ ಗ್ರಾಮದ ಬಸ್ ನಿಲ್ದಾಣದ ಬಳಿ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಇದರಿಂದ ಮಳೆ ಬಂದ ವೇಳೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದ್ದು, ಜನರು ಪಡುಬಾರದ ಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿದಿದ್ದರೂ ಮೌನ ವಹಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
-ನಿಂಗಯ್ಯ, ಯಜಮಾನ, ಕಾಮಗೆರೆ, ಹನೂರು
ಕಾಮಗಾರಿ ಪೂರ್ಣಗೊಳ್ಳದಿರುವುದು ಎಷ್ಟು ಸರಿ
ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದ್ದು, ವಾಹನ ಸವಾರರು ಆಗ್ಗಾಗ್ಗೆ ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇತ್ತ ಮನೆಯೊಳಗೆ ಚರಂಡಿ ಕೊಳಚೆ ನೀರು ನುಗ್ಗುತ್ತಿದ್ದು, ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿದಿದ್ದರೂ ಸಹ ಕಾಮಗಾರಿಯನ್ನು ಪೂರ್ಣಗೊಳಿಸದಿರುವುದು ಎಷ್ಟರ ಮಟ್ಟಿಗೆ ಸರಿ?
-ಕಿರಣ್, ಕಾಮಗೆರೆ ಮುಖ್ಯ ರಸ್ತೆ ಸಮೀಪದ ನಿವಾಸಿ.
ಸ್ಥಳೀಯರಿಗೆ ತುಂಬಾ ತೊಂದರೆ
ಕಾಮಗಾರಿ ಶುರು ಮಾಡಿ 2 ವರ್ಷವೇ ಕಳೆದಿದೆ. ಆದರೆ ಗ್ರಾಮದ ಕೆಲವು ಕಡೆ ಇನ್ನು ಪೂರ್ಣಗೊಂಡಿಲ್ಲ. ಇದರಿಂದ ಹೆಚ್ಚಾಗಿ ಸ್ಥಳೀಯರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಲಾಗಿದೆ. ಆದರೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಬೇಕು.
-ಲಕ್ಷ್ಮಣ್, ಕಾಮಗೆರೆ, ಹನೂರು
ನಮಗಾಗುತ್ತಿರುವ ತೊಂದರೆ ತಪ್ಪಿಸಿ
ನಮ್ಮ ಮನೆಯು ಮುಖ್ಯ ರಸ್ತೆಯ ಬದಿಯಲ್ಲಿದೆ. ಆದರೆ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸದ ಪರಿಣಾಮ ಮಳೆ ನೀರು ಮನೆಯೊಳಗೆ ನುಗ್ಗುತ್ತಿದೆ. ಇತ್ತ ತಿರುಗಾಡುವ ರಸ್ತೆಯು ಕೆಸರುಮಯವಾಗಿದೆ. ಇದರಿಂದ ಪಡುಬಾರದ ಕಷ್ಟ ಪಡುತ್ತಿದ್ದೇವೆ. ಆದ್ದರಿಂದ ಚರಂಡಿ ಹಾಗೂ ರಸ್ತೆಯನ್ನು ನಿರ್ಮಿಸುವುದರ ಮೂಲಕ ನಮಗಾಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು.
-ಮಂಗಳಮ್ಮ, ಕಾಮಗೆರೆ, ಹನೂರು
ಚರಂಡಿಯಿಂದ ದುರ್ನಾತ
ಮಳೆ ಬಂದ ವೇಳೆ ಚರಂಡಿಯ ಕೊಳಚೆ ನೀರು ನುಗ್ಗುತ್ತಿದ್ದು, ದುರ್ನಾತ ಬೀರುತ್ತಿದೆ. ಹುಳು ಉಪ್ಪಟಗಳು ಮನೆ ಸೇರುತ್ತಿವೆ. ಇದರಿಂದ ರೋಗರುಜಿನಗಳ ಭೀತಿ ನಮ್ಮನ್ನು ಆವರಿಸಿದೆ. ಇತ್ತ ಮನೆಯ ಗೋಡೆ ತೇವಾಂಶದಿಂದ ಶಿಥಿಲಗೊಳ್ಳುತ್ತಿದೆ. ಈ ಬಗ್ಗೆ ತಿಳಿದಿದ್ದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ. ಇದರಿಂದ ತುಂಬಾ ತೊಂದರೆ ಪಡುವಂತಾಗಿದೆ.
-ಕುಮಾರಿ, ಕಾಮಗೆರೆ, ಹನೂರು
ವಾಹನಗಳ ಸಂಚಾರ ಕಷ್ಟ
ಈ ರಸ್ತೆಯು ಮ.ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಹೆಚ್ಚಾಗಿ ಭಕ್ತರು ಸಂಚರಿಸುತ್ತಾರೆ. ಆದರೆ ಗ್ರಾಮದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇನ್ನು ಮಳೆ ಬಂದ ರಾತ್ರಿ ವೇಳೆಯಲ್ಲಂತೂ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ವಾಹನ ಸವಾರರು ಹಾಗೂ ಸ್ಥಳೀಯರು ಹರಸಾಹಸ ಪಡಬೇಕಿದೆ. ಆದ್ದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.
-ರಾಜು, ಕೆಆರ್‌ಎಸ್ ಆಟೋಮೋಬೈಲ್ ಮಾಲೀಕ ಕಾಮಗೆರೆ
ತಿರುಗಾಡಲು ತೊಂದರೆ
ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಮಳೆ ಬಂದ ವೇಳೆ ನೀರು ನಿಲ್ಲುವಂತಾಗಿದೆ. ಇದರಿಂದ ಅಂಗಡಿ ಮುಂಗಟ್ಟುಗಳಿಗೆ ಹೆಚ್ಚು ತೊಂದರೆಯಾಗುತ್ತಿದೆ. ಇತ್ತ ಸ್ಥಳೀಯರು ತಿರುಗಾಡಲು ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರು ಅನುಭವಿಸುತ್ತಿರುವ ತೊಂದರೆಯನ್ನು ತಪ್ಪಿಸಬೇಕು.
-ನಾಗೇಂದ್ರ, ಚಿಕನ್ ಸೆಂಟರ್ ಮಾಲೀಕ, ಕಾಮಗೆರೆ
ಮಳೆ ಬಂದರೆ ಹೊಳೆ
ಗ್ರಾಮದಲ್ಲಿ ರಸ್ತೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಇದರಿಂದ ಮಳೆ ಬಂದ ವೇಳೆ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯುತ್ತದೆ. ಇದರಿಂದ ಸ್ಥಳೀಯರು ಹೆಚ್ಚಾಗಿ ತೊಂದರೆ ಅನುಭವಿಸಬೇಕಿದೆ. ಈ ಬಗ್ಗೆ ತಿಳಿದಿದ್ದರೂ ಸಂಬಂಧಪಟ್ಟವರು ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚಿನ ಒತ್ತು ನೀಡುತ್ತಿಲ್ಲ.
ಪ್ರಕಾಶ್, ಕಾಮಗೆರೆ, ಹನೂರು
ಬಾಡಿಗೆದಾರರು ಅಗತ್ಯ ದಾಖಲೆ ಸಲ್ಲಿಸಿಲ್ಲ
ಕಾಮಗೆರೆ ಗ್ರಾಮದಲ್ಲಿ ಅಂಗಡಿಯನ್ನು ಹೊಂದಿದ್ದ ಕೆಲ ಬಾಡಿಗೆದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ. ಇದರಿಂದ ಸರ್ಕಾರದ ಪರಿಹಾರ ನೀಡುವಲ್ಲಿ ಸಮಸ್ಯೆಯಾಗಿದೆ. ಹಾಗಾಗಿ ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಈ ದಿಸೆಯಲ್ಲಿ ಅಗತ್ಯ ದಾಖಲೆ ಸಲ್ಲಿಸುವ ಸಂಬಂಧ ಗ್ರಾಪಂ ಪಿಡಿಒ ಅವರೊಂದಿಗೆ ಚರ್ಚಿಸಲಾಗಿದ್ದು, ಒಂದು ವಾರದೊಳಗೆ ದಾಖಲೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಂದ ಈ ಬಗ್ಗೆ ಅನುಮೋದನೆ ಪಡೆದು ಅಗತ್ಯ ಕ್ರಮವಹಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ರಾಜೇಶ್ ಮುನ್ಸಿ, ಎಇಇ ಕೆ.ಶಿಫ್ ಯೋಜನೆ