ಹೈನುಗಾರಿಕೆಯಿಂದ ರೈತರ ಜೀವನ ಸಮೃದ್ಧಿ

21raju2
Published on

ಚಾಮರಾಜನಗರ: ಹೈನುಗಾರಿಕೆಯಿಂದ ಜಿಲ್ಲೆಯ ರೈತರ ಜೀವನ ಸಮೃದ್ಧಿಯಾಗಿದ್ದು, ಇನ್ನು ಹೆಚ್ಚಿನ ರೀತಿಯಲ್ಲಿ ಹಾಲಿನ ಡೇರಿಗಳನ್ನು ಆರಂಭಿಸಿ, ಹಾಲು ಸಂಗ್ರಹಿಸುವ ಮೂಲಕ ರೈತರು ಆರ್ಥಿಕ ಪ್ರಗತಿಯನ್ನು ಹೊಂದಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು.


ತಾಲೂಕಿನ ಮಲ್ಲದೇವನಹಳ್ಳಿಯಲ್ಲಿ ಸೋಮವಾರ ನೂತನವಾಗಿ ಆರಂಭವಾದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹಾಲು ಶೇಖರಣೆ ಮಾಡುವ ಮೂಲಕ ಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಲ್ಲದೇವನಹಳ್ಳಿ ಗಡಿ ಅಂಚಿನಲ್ಲಿರುವ ಕುಗ್ರಾಮವಾಗಿದೆ. ನಾಗವಳ್ಳಿ, ನಲ್ಲೂರು ಹಾಗು ಪುಟ್ಟನಪುರ ಗ್ರಾಮಕ್ಕೆ ಈ ಗ್ರಾಮವು ಸುಮಾರು ನಾಲ್ಕು ಕಿ.ಮೀ.ಗೂ ಹೆಚ್ಚು ದೂರವಾಗುತ್ತಿದೆ. ಈ ಭಾಗದ ರೈತರು ಹಸು ಸಾಕಾಣಿಕೆ ಮಾಡಿ, ಹಾಲು ಕರೆದುಕೊಂಡು ಪ್ರತಿನಿತ್ಯ ಎರಡು ಅವಧಿಯಲ್ಲಿ ಅಕ್ಕಪಕ್ಕದ ಗ್ರಾಮಗಳ ಡೇರಿಗೆ ನೀಡಬೇಕಾಗಿತ್ತು. ಇದನ್ನುರಿತು ಈ ಭಾಗದ ಮುಖಂಡರು ಕುದೇರಿನಲ್ಲಿ ಚಾಮುಲ್ ಕಚೇರಿಗೆ ಭೇಟಿ ನೀಡಿ, ಡೇರಿ ಆರಂಭಿಸುವ ಬಗ್ಗೆ ಮಾಹಿತಿ ಪಡೆದುಕೊಂಡು. ಒಗ್ಗಟ್ಟಿನಿಂದ ಗ್ರಾಮದಲ್ಲಿಯೇ ಡೇರಿ ಆರಂಭಿಸುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಬಸವರಾಜು ಮೆಚ್ಚುಗೆ ವ್ಯಕ್ತಪಡಿಸಿದರು.


ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಮಲ್ಲದೇವನಹಳ್ಳಿಯಲ್ಲಿ ಡೇರಿ ಆರಂಭವಾಗಿರುವುದು ಸಂತಸವಾಗಿದೆ. ಈ ಭಾಗದಲ್ಲಿರುವ ರೈತರು ಶ್ರಮ ಜೀವಿಗಳು. ಆರಂಭದಲ್ಲಿ 200 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಕನಿಷ್ಟ 2 ಸಾವಿರ ಲೀಟರ್ ಹಾಲು ಶೇಖರಣೆ ಮಾಡಿ ಬಿಎಂಸಿ ಕೇಂದ್ರವನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಡೇರಿ ಅಭಿವೃದ್ದಿಯಾಗಬೇಕು. ಪ್ರತಿಯೊಬ್ಬರು ಸಂಘದ ಸದಸ್ಯತ್ವವನ್ನು ಪಡೆದು ಡೇರಿಗೆ ಹಾಲು ಹಾಕುವ ಮೂಲಕ ಸರ್ಕಾರ ಹಾಗೂ ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಈಗ ಸರ್ಕಾರ ಯಶಸ್ವಿನಿ ವಿಮೆ ಯೋಜನೆಯನ್ನು ಜಾರಿ ಮಾಡಿದ್ದು, ಇದು ನಿಮ್ಮ ಕುಟುಂಬಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು.


ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರಮೂರ್ತಿ, ಸಂಘದ ಅಧ್ಯಕ್ಷ ಎನ್.ರಂಗಸ್ವಾಮಿ, ಹೆಬ್ಬಸೂರು ಗ್ರಾಪಂ ಅಧ್ಯಕ್ಷ ಜಯಶಂಕರ್, ಚಾಮುಲ್ ಪ್ರಧಾನ ವ್ಯವಸ್ಥಾಪಕ ಕೆ.ರಾಜಕುಮಾರ್, ಸಹಾಯಕ ವ್ಯವಸ್ಥಾಪಕ ಡಾ.ಅಮರ್, ವಿಸ್ತಾರಣಾಧಿಕಾರಿಗಳಾದ ಶ್ಯಾಮ್‌ಸುಂದರ್, ನಾಗೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ನಲ್ಲೂರು ಮಹದೇವಪ್ಪ, ಗ್ರಾಪಂ ಸದಸ್ಯ ಕುಮಾರ್, ಯ.ಶಿವಣ್ಣ, ಯ.ರಾಜು, ಮುಖಂಡರಾದ ಹೆಬ್ಬಸೂರು ಮಹೇಶ್, ಸಂಘದ ನಿರ್ದೇಶಕರಾದ ಬಿ. ಮಹೇಶ್, ವಿಜಯಕುಮಾರ್, ಮಹದೇವ್, ಬಸವರಾಜು, ಸಿದ್ದರಾಜು ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net