ಪ್ರಶಸ್ತಿಗಾಗಿ ಹಿಂದು ವಿರೋಧಿ ಹೇಳಿಕೆ

06chn5
Published on

ಚಾಮರಾಜನಗರ: ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಳ್ಳಲು ಹಲವು ಸ್ವಾಮೀಜಿಗಳು ಹಾಗೂ ಸಾಹಿತಿಗಳು ಹಿಂದು ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಕಮ್ಯೂನಿಸ್ಟ್ ಮತ್ತು ನಕ್ಸಲೈಟ್ ಆಗಬೇಕಾಗಿದ್ದವರು ಕಾವಿತೊಟ್ಟಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಕಿಡಿಕಾರಿದರು.

ತಾಲೂಕಿನ ಸಿಗೇವಾಡಿ ಗ್ರಾಮದಲ್ಲಿ ಮಾಧ್ಯಮದ ಜತೆಗೆ ಮಾತನಾಡಿ, ಈ ವರ್ಷ ಹಿಂದು ವಿರೋಧಿಯಾಗಿ ಮಾತನಾಡಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಮುಂದಿನ ವರ್ಷ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಹಲವು ಸ್ವಾಮೀಜಿಗಳು ಹಾಗೂ ಸಾಹಿತಿಗಳು ಹಿಂದು ವಿರೋಧ ಹೇಳಿಕೆ ನೀಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮಾಜ ಹಿಂದು ಸಂಸ್ಕೃತಿಯ ಭಾಗವಾಗಿದೆ ಎಂದು ಸಾಣೆಹಳ್ಳಿ ಶ್ರೀಗಳ ಗಣಪತಿ ಹೇಳಿಕೆ ವಿಚಾರವಾಗಿ ಖಂಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲುಗುಣದಿಂದ ರಾಜ್ಯದಲ್ಲಿ ಭೀಕರ ಬರಪರಿಸ್ಥಿತಿ ಉಂಟಾಗಿದೆ. ನಾವು ಜಿಲ್ಲೆಗೆ ಬರುತ್ತಲೇ ನಮ್ಮ ಕಾಲ್ಗುಣದಿಂದ ಮಳೆಯಾಗಿದೆ. ಈ ಭಾಗದಲ್ಲಿ ಮಳೆಯಾಗದೇ ರೈತರ ಬೆಳೆ ಒಣಗಿದೆ. ಉಚಿತ ಕರೆಂಟ್ ಎಂದು ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಶ್ರಮಪಡುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ರಾಮನಗರ, ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಪ್ರಯತ್ನದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಹಣವನ್ನು ಸರಿಯಾಗಿ ಬಳಕೆ ಮಾಡದೇ, ಬರಪರಿಸ್ಥಿತಿಯನ್ನು ಕೆಂದ್ರ ಸರ್ಕಾರಕ್ಕೆ ಸರಿಯಾಗಿ ಮನವರಿಕೆ ಮಾಡದೇ ಪ್ರಧಾನಿ ನರೇಂದ್ರಮೋದಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸೋನಿಯಾ ಹಾಗೂ ರಾಹುಲ್ಗಾಂಧಿ ಭೇಟಿ ಮಾಡಲು 2-3 ದಿನ ಕಾಯುತ್ತಾರೆ. ಪ್ರಧಾನಿ ಭೇಟಿ ನೀಡಲು ಅವಕಾಶ ಮಾಡಿಕೊಡುತ್ತಿಲ್ಲ ಎನ್ನುತ್ತಾರೆ. ಇದನ್ನು ವಿಷಯಾಂತರ ಮಾಡಲು ಹುಲಿ ಉಗುರು, ಚಿರತೆ ದಾಳಿ ವಿಚಾರ ತರುತ್ತಿದ್ದಾರೆ. ನಾವು ಯಾವ ಸರ್ಕಾರ ಕೆಡವಲು ಪ್ರಯತ್ನಿಸುವುದಿಲ್ಲ ಅವರಾಗಿಯೇ ಕಿತ್ತಾಡಿಕೊಂಡರೆ ನಾವು ಏನು ಮಾಡಲು ಸಾಧ್ಯ. ಮುಂದಿನ ದಿನಗಳಲ್ಲಿ ಸರ್ಕಾರ ದಿವಾಳಿಯಾಗಲಿದ್ದು, ಡಿಸೆಂಬರ್ ವೇಳೆಗೆ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾಜ್ಯವನ್ನು ಮತ್ತೊಂದು ಪಂಜಾಬ್ ಹಾಗೂ ದೆಹಲಿ ಮಾಡಲು ಹೊರಟಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net