ಕಲಾವಿದರಿಗೆ ಬಂದಿಲ್ಲ ಗೌರವಧನ

05chn4
Published on

ಚಾಮರಾಜನಗರ: ಜಿಲ್ಲೆಯಲ್ಲಿ ಆಯೋಜಿಸಿದ್ದ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳಿಯ ಕಲಾವಿದರು ಹಾಗೂ ಕವಿಗಳಿಗೆ ಈ ವರೆಗೂ ಗೌರವ ಧನ ನೀಡಿಲ್ಲ.

ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಚಾಮರಾಜನಗರದಲ್ಲಿ ಅ.17 ರಿಂದ 20ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲಾ ದಸರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಅ. 17ರಂದು ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಸಾಂಪ್ರಾದಾಯಿಕ ಪೂಜಾ ಕೈಂಕರ್ಯದೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತಿತ್ತು. ಈ ಸಂದರ್ಭದಲ್ಲಿ ಹತ್ತಾರು ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಶ್ರೀಚಾಮರಾಜೇಶ್ವರ ದೇವಸ್ಥಾನ ಮುಂಭಾಗದ ಮುಖ್ಯ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ನಾಲ್ಕೂ ದಿನಗಳ ಕಾಲವೂ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು.

ಅದಲ್ಲದೇ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕವಿಗೋಷ್ಠಿ ಹಾಗೂ ನಾಟಕ ಪ್ರದರ್ಶನ ನಡೆದಿತ್ತು. ಚಿತ್ರಕಲಾ ಪ್ರದರ್ಶನದಲ್ಲಿ ಹತ್ತಾರು ಕಲಾವಿದರು ಭಾಗಿಯಾಗಿದ್ದರು. ಅಲ್ಲದೇ ಜೆ.ಎಚ್.ಪಟೇಲ್ ಸಭಾಂಗಣದಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಒಟ್ಟಾರೆಯಾಗಿ ದಸರಾ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಲಾವಿದರು, ಕವಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದರು.
ಜಿಲ್ಲಾ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗೌರವಧನ ನೀಡಬೇಕಾಗಿದ್ದು, ಕಾರ್ಯಕ್ರಮ ಮುಗಿದು 15 ದಿನಗಳಾದರೂ ಗೌರವಧನ ಇಂದಿಗೂ ಬಿಡುಗಡೆ ಆಗದೇ ಇರುವುದಕ್ಕೆ ಕಲಾವಿದರು ಬೇಸರ ಹೊರಹಾಕಿದ್ದಾರೆ.

ದಸರಾ ಮಹೋತ್ಸವದಲ್ಲಿ ಹೊರಗಿನ ಕಲಾವಿದರು ಹೆಚ್ಚಾಗಿ ಭಾಗವಹಿಸಿದ್ದರೇ ಅದಾಗಲೇ ಗೌರವಧನ ನೀಡಿರುತ್ತಿದ್ದರು. ಆದರೆ ಸ್ಥಳೀಯ ಕಲಾವಿದರು ಭಾಗವಹಿಸಿದ್ದರಿಂದ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಜಾನಪದ ಕಲಾತಂಡಗಳು, ನೃತ್ಯ, ತಬೂರಿ ಮತ್ತು ಸೋಭಾನೆ ಪದ ಹಾಗೂ ಇನ್ನಿತರೆ ಕಲಾವಿದರು ಬಡ ಮತ್ತು ಮಧ್ಯಮವರ್ಗಗಳಿಂದ ಬಂದಿದ್ದು, ಇದನ್ನೇ ನಂಬಿಕೊಂಡು ಜೀವನ ಸಾಗಿಸುವವರು ಇದ್ದಾರೆ. ದಸರಾ ಮಹೋತ್ಸವಕ್ಕೂ ಮೊದಲೇ ಕಾರ್ಯಕ್ರಮಕ್ಕೆ ಹಣ ಬಿಡುಗಡೆ ಆಗಿದ್ದರೂ, ಈವರೆಗೂ ಕಲಾವಿದರಿಗೆ ಗೌರವಧನ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಹಲವು ಸ್ಥಳೀಯ ಕಲಾವಿದರು ಆಕ್ರೋಶ ಹೊರಹಾಕಿದ್ದಾರೆ.

ಅನುದಾನ ಬಂದರೂ ನೀಡಿಲ್ಲ:
ಜಿಲ್ಲಾ ದಸರಾ ಮಹೋತ್ಸವ ಆಯೋಜನೆಗಿಂತಲೂ ಮೊದಲೇ ಹಣ ಬಿಡುಗಡೆ ಆಗಿದ್ದರೂ ಕಲಾವಿದರು ಮತ್ತು ಕವಿಗಳಿಗೆ ಗೌರವಧನ ನೀಡಿಲ್ಲ ಎಂದು ಕಲಾವಿದರು ಆರೋಪಿಸುತ್ತಾರೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವ ಆಚರಣೆ ಪೂರ್ವ ಸಿದ್ಧತಾ ಸಭೆಯಲ್ಲೇ ಸಾಕಷ್ಟು ಕಲಾವಿದರು ಹಾಗೂ ಹೋರಾಟಗಾರರು ಸೂಕ್ತ ಸಮಯಕ್ಕೆ ಕಲಾವಿದರಿಗೆ ಗೌರವಧನ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಕಾರ್ಯಕ್ರಮ ಮುಗಿದು 15 ದಿನಗಳು ಕಳೆದರೂ ಕಲಾವಿದರಿಗೆ ಗೌರವಧನ ನೀಡಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಕಲಾವಿದರಿಂದ ಬ್ಯಾಂಕ್‌ಖಾತೆ ಮಾಹಿತಿಯನ್ನು ಪಡೆದುಕೊಂಡಿದ್ದರೂ ಹಣ ಬಿಡುಗಡೆ ಮಾಡಿಲ್ಲ. ಕಾರ್ಯಕ್ರಮಕ್ಕೂ ಮೊದಲೇ ಹಣ ಬಿಡುಗಡೆಯಾಗಿದ್ದರೂ, ಕಲಾವಿದರಿಗೆ ನೀಡಿಲ್ಲ ಎಂಬುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಲಕ್ಷ್ಯ ಮನೋಭಾವನೆಯನ್ನು ತೋರಿಸುತ್ತದೆ ಎಂದು ಕಲಾವಿದ ಕೆಂಪರಾಜು ವಿಜಯವಾಣಿ ಜತೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ನೆನಪಿನ ಕಾಣಿಕೆಯನ್ನು ನೀಡಿಲ್ಲ:
ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಿಲ್ಲ ಎಂದು ಯುವಕವಿಗಳು ಬೇಸರ ಹೊರಹಾಕಿದ್ದಾರೆ. ಕವಿಗೋಷ್ಠಿ ಉದ್ಘಾಟನಾ ಕಾರ್ಯಕ್ರಮ ತಡವಾಗಿ ಪ್ರಾರಂಭವಾಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಅದರಲ್ಲೂ ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಯುವಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸುವ ಕವಿಗೋಷ್ಠಿಯಲ್ಲಿ ನೆನಪಿನ ಕಾಣಿಕೆ ಇಲ್ಲವೇ ಪ್ರಮಾಣ ಪತ್ರವನ್ನಾದರೂ ನೀಡಬೇಕಿತ್ತು. ಅದೂ ಆಗಲಿಲ್ಲ ಈಗ ಗೌರವಧನವನ್ನು ನೀಡಲು ತಡಮಾಡುತ್ತಿರುವುದು ಎಷ್ಟು ಸರಿ? ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯ ಕಲಾವಿದರು ಹಾಗೂ ಕವಿಗಳಿಗೆ ಗೌರವಧನ ನೀಡಬೇಕು ಎಂದು ಯುಕವಿ ಮನು ಸತ್ತೇಗಾಲ ಆಗ್ರಹಿಸಿದ್ದಾರೆ.

ಜಿಲ್ಲಾ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಜಾನಪದ ಕಲಾವಿದರು ಹಾಗೂ ಕವಿಗಳಿಗೆ ಶ್ರೀಘ್ರದಲ್ಲೇ ಗೌರವಧನ ವಿತರಣೆ ಮಾಡಲಾಗುವುದು. ಕಲಾವಿದರ ಬ್ಯಾಂಕ್ ಖಾತೆ ಮಾಹಿತಿ ಕಳೆಹಾಕಲಾಗಿದೆ.-ಗುರುಲಿಂಗಯ್ಯ, ಉಪನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಾಮರಾಜನಗರ. ಚಾಮರಾಜನಗರ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳಿಗೆ ಈವರೆಗೂ ಗೌರವಧನ ಮತ್ತು ನೆನಪಿನ ಕಾಣಿಕೆ ನೀಡದಿರುವುದು ವಿಷಾದನೀಯ. ಕಾರ್ಯಕ್ರಮದಲ್ಲೇ ನೆಪಮಾತ್ರಕ್ಕೆ ಪ್ರಮಾಣ ಪತ್ರವನ್ನಾದರೂ ವಿತರಣೆ ಮಾಡಲಿಲ್ಲ.-ಮನು ಸತ್ತೇಗಾಲ, ಯುವಕವಿ, ಕೊಳ್ಳೇಗಾಲ. ಜಿಲ್ಲಾ ದಸರಾ ಮಹೋತ್ಸವಕ್ಕೂ ಮುಂಚಿತವೇ ಹಣ ಬಿಡುಗಡೆ ಆಗಿದೆ. ಆದರೂ ಗೌರವಧನ ನೀಡಿಲ್ಲ. ದಸರಾ ಕಾರ್ಯಕ್ರಮದಲ್ಲಿ ಸಾಕಷ್ಟು ಬಡಕಲಾವಿದರು ಭಾಗವಹಿಸುತ್ತಾರೆ. ಪ್ರಶ್ನೆಮಾಡುವ ಕಲಾವಿದರಿಗೆ ಮುಂದೆ ಅವಕಾಶಗಳನ್ನು ನೀಡುವುದಿಲ್ಲ.-ಕೆಂಪರಾಜು, ಜಾನಪದ ಕಲಾವಿದ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net