ಅಕ್ರಮ ಗಣಿಗಾರಿಕೆಗೆ ತಡೆಹಾಕುವಂತೆ ಮನವಿ

03chn11
Published on

ಚಾಮರಾಜನಗರ: ತಾಲೂಕಿನ ತೆರಕಣಾಂಬಿ ಗ್ರಾಮದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಎಸ್.ಪಿ.ಮಹೇಶ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದರು. ತೆರಕಣಾಂಬಿ ಗ್ರಾಮಕ್ಕೆ ಸೇರಿದ ಸ.ನಂ. 335/1, 336, 336/5, 3391 ರಲ್ಲಿ ಒಟ್ಟು 1.33 ಎಕರೆ ಹಾಗೂ ಸ.ನಂ, 337,2 ರಲ್ಲಿ 4.18 ಎಕರೆಯಂತೆ, ಒಟ್ಟು 8.34.08 ಎಕರೆ ಜಮೀನಿನಲ್ಲಿ ನಂದಿನಿ ಸ್ಟೋನ್ ಇಂಡೆ ಸಂಸ್ಥೆಯವರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಈ ಕುರಿತು ಕ್ರಮಕೈಗೊಳ್ಳಬೇಕೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಅದೇ ಗ್ರಾಮದ ಸ.ನಂ 337,2ರಲ್ಲಿ ಸುಮಾರು 4.008 ಎಕರೆ ಪ್ರದೇಶ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವವರಿಗೆ ಸೇರಿದ್ದು ಎಂಬ ಗುಮಾನಿ ಜಿಲ್ಲೆಯಲ್ಲಿ ಹರಡಿದೆ. ಶಾಸಕರು ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ನಷ್ಟವಾಗುತ್ತಿದೆ. ಪ್ರಕೃತಿ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂಬ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಆಪ್ತಸಹಾಯಕ ಭರತ್ ಭೂಷಣ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭೈರಲಿಂಗಸ್ವಾಮಿ, ಟೌನ್ ಅಧ್ಯಕ್ಷ ರಂಗಸ್ವಾಮಿ, ಅಟ್ಟಗೂಳಿಪುರ ಮಂಜು, ಪ್ರಕಾಶ್, ದೊಡ್ಡರಾಯಪೇಟೆ ಸಿದ್ದರಾಜು, ಬಿವಿಎ್ ಸಂಯೋಜಕ ಚಂದ್ರಕಾಂತ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net