

ಚಾಮರಾಜನಗರ : ಇಂದಿನ ಯುವತಲೆಮಾರು ಶಿಕ್ಷಣದ ಜತೆಗೆ ಸಂಶೋಧನೆ ಕಡೆಗೆ ಹೆಚ್ಚಾಗಿ ಆಸಕ್ತಿವಹಿಸಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಮಹಿಳಾ ಕಾಲೇಜು, ಗಣಕ ವಿಜ್ಞಾನ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಂಶೋಧನಾ ವಿಧಾನ ಕುರಿತ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸಂಶೋಧನೆಯಲ್ಲಿ ಉನ್ನತ ಸ್ಥಾನದಲ್ಲಿದೆ. ಉತ್ತಮವಾದ ಸಂಶೋಧನೆಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿರುವ, ಜೆಎಸ್‌ಎಸ್ ಮಹಾವಿದ್ಯಾಪೀಠ ಉನ್ನತ ಮಟ್ಟದಲ್ಲಿದೆ. ಇಂತಹ ಕಾರ್ಯಾಗಾರಗಳು ಸಂಶೋಧಕರಿಗೆ ತುಂಬ ಅನುಕೂಲಕರವಾಗಿದೆ. ಸಮಾಜ ವಿಜ್ಞಾನ ವಿಷಯದಲ್ಲಿ ಸಂಶೋಧನೆ ಕೈಗೊಳ್ಳುವುದು ಬಹುಮುಖ್ಯವಾಗುತ್ತದೆ. ಇದರಲ್ಲಿ ಜವಾಬ್ದಾರಿ ಹೆಚ್ಚಾಗಿದೆ. ಯಾವುದೇ ವಿಶ್ವವಿದ್ಯಾಲಯಗಳು ಅತ್ಯುತ್ತಮ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪ್ರಸ್ತುತ ವಿಶ್ವವಿದ್ಯಾಲಯಗಳಲ್ಲಿ ಬೃಹತ್ ಗ್ರಂಥಾಲಯಗಳು ಲಭ್ಯವಿದ್ದು, ಇದು ಸಂಶೋಧನೆಗೆ ಸಹಾಯಕವಾಗುತ್ತದೆ. ಜಿಲ್ಲೆಯಲ್ಲಿ ಪ್ರತಿ 15 ಕಿ.ಮೀ. ವ್ಯಾಪ್ತಿಯಲ್ಲಿ ಭಾಷೆ ಬದಲಾವಣೆಯಾಗುತ್ತ ಹೋಗುತ್ತದೆ. ಈ ನಿಟ್ಟಿನಲ್ಲಿ ಭಾಷೆಗಳ ಬಗೆಗಿನ ಸಂಶೋಧನೆ ಅಗತ್ಯವಾಗುತ್ತದೆ. ಯುವ ತಲೆಮಾರು ಇದನ್ನು ಮನಗಾಣಬೇಕು ಎಂದರು.
ಮೈಸೂರು ಜೆಎಸ್‌ಎಸ್ ಕಾಲೇಜಿನ, ಕನ್ನಡ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಪ್ರಭುಸ್ವಾಮಿ ಮಾತನಾಡಿ, ಸಂಶೋಧನೆ ಅಧ್ಯಯನದ ಒಂದು ಭಾಗವಾಗಿದೆ. ಸಂಶೋಧನೆ ಶಿಕ್ಷಣದ ಆಚೆಗೂ ವಿಸ್ತಾರವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸಂಶೋಧನೆಯನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿದೆ. ಸಂಶೋಧನೆಯಲ್ಲಿ ಶಿಸ್ತು ಬಹುಮುಖ್ಯ, ಸಂಶೋಧನಾ ಮನೋಭಾವ, ಕುತೂಹಲ, ಆಸಕ್ತಿ ಇದ್ದರೆ ಮಾತ್ರ ಸಂಶೋಧನೆ ಸುಲಭವಾಗುತ್ತದೆ ಎಂದು ಹೇಳಿದರು.
ಮೈಸೂರು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ.ವಿ.ಎನ್.ಮಂಜುನಾಥ್ ಆರಾಧ್ಯ, ಪ್ರಾಂಶುಪಾಲ ಜಿ.ಸಿದ್ದರಾಜು, ಆಂತರಿಕ ಗುಣಮಟ್ಟ ಖಾತ್ರಿ ವಿಭಾಗದ ಸಂಯೋಜಕಿ ಬಿ.ರೇವಣಾಂಬ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥೆ ಎಲ್.ಎನ್.ಶೋಭಾ, ಸಹಾಯಕ ಪ್ರಾಧ್ಯಾಪಕಿ ಎಚ್.ವಿ.ಪೂಜಾ, ಕೆ.ಎಸ್.ಅರುಣಶ್ರೀ ಇತರರು ಉಪಸ್ಥಿತರಿದ್ದರು.