

ಚಾಮರಾಜನಗರ: ಕನ್ನಡ ಸಾಹಿತ್ಯ, ಸಂಸ್ಕೃತಿ ,ಪರಂಪರೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ.ದಾನೇಶ್ವರಿ ಹೇಳಿದರು.
ನಗರದ ಜೈಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡಾಂಬೆಗೆ ಕನ್ನಡದಾರತಿ ,ಕನ್ನಡ ರಂಗೋಲಿ, ಕನ್ನಡದ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡತನ ,ಕನ್ನಡದ ಚಿಂತನೆ, ಕನ್ನಡದ ಯೋಚನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಭಾಷೆ ಉನ್ನತವಾಗಿ ಬೆಳೆಯಲಿದೆ. ಭಾಷೆಗೆ ಬಳಕೆ ಬಹಳ ಮುಖ್ಯವಾಗುತ್ತದೆ. ಬಳಕೆಯಾಗದೆ ಇದ್ದಾಗ ಭಾಷೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಮನೆ ಮನೆಯಲ್ಲೂ ಕನ್ನಡದ ಆತ್ಮ ಜ್ಯೋತಿಯನ್ನು ಬೆಳಗಿಸುವ ಮೂಲಕ ಕನ್ನಡದ ಭಾಷೆಯನ್ನು ನಾವು ಬಳಸೋಣ ಎಂದರು.
ನಿವೃತ್ತ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕದಂಬರು,ಗಂಗರು, ಹೊಯ್ಸಳರು ಆಳಿದ ನಾಡು ಇದು. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಭೈರಪ್ಪನವರು ನಮ್ಮ ಕರ್ನಾಟಕದವರು ಎಂಬುದು ಹೆಮ್ಮೆ. ಸಾಹಿತ್ಯ ಪುಸ್ತಕಗಳ ಅಧ್ಯಯನದ ಮೂಲಕ ಕನ್ನಡ ಸಾಹಿತ್ಯವನ್ನು ಉಳಿಸೋಣ ಎಂದು ಹೇಳಿದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡವನ್ನು ಬಳಸುವ ಜಿಲ್ಲೆಗಳಲ್ಲಿ ಚಾಮರಾಜನಗರ ಒಂದಾಗಿದೆ. ಕನ್ನಡದ ಸಂಸ್ಕೃತಿ, ಪರಂಪರೆ , ಹಬ್ಬಗಳು, ಉತ್ಸವಗಳು ಎಲ್ಲವನ್ನು ಆಚರಿಸಿಕೊಂಡು ಕನ್ನಡದ ವಾತಾವರಣವನ್ನು ಉಂಟುಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ನಾಟ್ಯಕಲಾ ಸರಸ್ವತಿ ಸಂಸ್ಥೆಯ ಅಧ್ಯಕ್ಷೆ ಡಾ. ಅಕ್ಷತಾ ಜೈನ್, ಜೈಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಮಾಲ ,ನಾಗಶ್ರೀ, ಋಗ್ವೇದಿ, ಕವಯತ್ರಿ ಮಂಜುಳಾ, ಯೂತ್‌ಕ್ಲಬ್ ಅಧ್ಯಕ್ಷೆ ಶರಣ್ಯ ಋಗ್ವೇದಿ, ಸಾನಿಕ, ಮಾಲತಿ, ಶ್ರಾವ್ಯ, ಬಿ.ಕೆ.ಆರಾಧ್ಯ, ಶ್ರಾವ್ಯ, ಸಿಂಚನ ಉಪಸ್ಥಿತರಿದ್ದರು.