

ಚಾಮರಾಜನಗರ: ಚಾ.ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕ ಡಾ.ಮಂಜುನಾಥ್ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಮ್ಸ್ ಟೀಚರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಮಾರುತಿ ಆಗ್ರಹಿಸಿದರು.
ಸಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ನಿಶಾ ಎಂಬುವವರ ಅನಧಿಕೃತ ಗೈರು ಹಾಜರಿ ಹಾಗೂ ಕರ್ತವ್ಯದಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ನಿರ್ದೇಶಕರ ಆಡಳಿತ ಕಚೇರಿಯಿಂದ ನಿಶಾ ಅವರನ್ನು ಬೋಧನಾ ಆಸ್ಪತ್ರೆಯ ಆಡಳಿತ ಕಚೇರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಮೌಖಿಕವಾಗಿ ತಿಳಿಸಿರುತ್ತಾರೆ. ಆದರೆ ನಿಶಾ, ವಿನಯ್, ಡಿ.ಮಹದೇವ, ಬೀರೆಗೌಡ, ಮಹೇಶ್‌ಕುಮಾರ್ ಹಾಗೂ ಸಹಚರರು ಅನಧೀಕೃತವಾಗಿ ಪ್ರವೇಶಮಾಡಿ ನಿರ್ದೇಶಕರಿಗೆ ಹಲ್ಲೆ ಮಾಡಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ತಿಳಿಸಿದರು.
ಸಿಮ್ಸ್ ಡೀನ್ ಹಾಗೂ ನಿರ್ದೇಶಕರು ಹುದ್ದೆಯನ್ನು ವಹಿಸಿಕೊಂಡಾಗಿನಿಂದ, ಇಲ್ಲಿಯವರೆಗೆ ಹಲವಾರು ಉತ್ತಮ ಯೋಜನೆಗಳನ್ನು ಕೈಗೊಂಡು ಕಾರ್ಯರೂಪಕ್ಕೆ ತರುವಲ್ಲಿ ನಿರತರಾಗಿದ್ದಾರೆ. ಆಸ್ಪತ್ರೆ ಮತ್ತು ಕಾಲೇಜಿನ ಆಡಳಿತ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ತಂದು ಉತ್ತಮ ಆಡಳಿತವನ್ನು ನಡೆಸುತ್ತಿದ್ದಾರೆ. ಈ ರೀತಿಯ ಅಹಿತಕರ ಘಟನೆಗಳು ಮರುಕಳಿಸದ ಹಾಗೆ ಡೀನ್ ಅವರ ಕಾರ್ಯಗಳಿಗೆ ಸಹಕರಿಸುತ್ತೇವೆ. ಹಲ್ಲೇ ಮಾಡಲು ಮುಂದಾದವರ ಮೇಲೆ ಕಾನೂನು ರೀತಿಯ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಿಮ್ಸ್ ಆಸ್ಪತ್ರೆ ಅಥವಾ ಕಾಲೇಜಿನಲ್ಲಿ ಬಿ, ಸಿ ಮತ್ತು ಡಿ ವರ್ಗದಲ್ಲಿ ಯಾವುದೇ ರೀತಿಯ ಸಂಘ ಸಂಸ್ಥೆಗಳು ಇರುವುದಿಲ್ಲ. ಸಾರ್ವಜನಿಕರು ಸಂಸ್ಥೆಯ ಬಗೆಗಿನ ಹಾಗೂ ನಿರ್ದೇಶಕರ ಬಗೆಗಿನ ತಪ್ಪು ಮಾಹಿತಿಯ ಬಗ್ಗೆ ಕಿವಿಗೊಡದೇ ಸಂಸ್ಥೆ ಹಾಗೂ ಆಸ್ಪತ್ರೆಯ ಸೌಲಭ್ಯಗಳನ್ನು ನಿರಾಂತಕವಾಗಿ ಪಡೆಯಬಹುದು. ಸಿಮ್ಸ್ ನಿರ್ದೇಶಕರ ಮೇಲಿನ ಹಲ್ಲೆಯನ್ನು ಖಂಡಿಸಿ ನ.4 ರಂದು ಸಿಮ್ಸ್ ಬೋಧನಾ ಆಸ್ಪತ್ರೆಯ ವೈದ್ಯರು, ನೌಕರರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಿಮ್ಸ್ ಟೀಚರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಡಾ.ಕೆ.ಪುರುಷೋತ್ತಮ್, ಖಜಾಂಚಿ ಡಾ.ನವೀನ್, ಡಾ.ಸಿದ್ದರಾಜು ಬೀರಾದರ, ಡಾ.ವಿನುತಾ, ಡಾ.ರಾಕೇಶ್, ಮಹೇಶ್, ಸೌರಭ, ಮಾದೇಶ್, ಗಂಗಮ್ಮ, ಸಂತೋಷ್ ಇದ್ದರು.