ಸುವರ್ಣಾವತಿಯಲ್ಲಿ ಬೋಟಿಂಗ್ ಏನಾಯ್ತು?

03chn1
Published on

ಚಾಮರಾಜನಗರ: ತಾಲೂಕಿನ ಅವಳಿ ಜಲಾಶಯಗಳಲ್ಲಿ ಒಂದಾಗಿರುವ ಸುವರ್ಣಾವತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಸಲುವಾಗಿ ಆಯೋಜಿಸಿದ್ದ ‘ಬೋಟಿಂಗ್ ಮತ್ತು ಜಲ ಸಾಹಸ ಕ್ರೀಡೆ’ ಕೇವಲ ಒಂದೇ ದಿನಕ್ಕೆ ಸೀಮಿತವಾಯಿತು.

ಯುವಜನ ಸೇವಾ ವತ್ತು ಕ್ರೀಡಾ ಇಲಾಖೆ ವತಿಯಿಂದ ಮೇ.26ರಂದು ಸುವರ್ಣಾವತಿ ಜಲಾಶಯದಲ್ಲಿ ‘ಬೋಟಿಂಗ್ ಮತ್ತು ಜಲ ಸಾಹಸ ಕ್ರೀಡೆ’ ಆಯೋಜಿಸಿತ್ತು. ನೂರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು ಭಾಗವಹಿಸಿ ಜಲಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಸುವರ್ಣಾವತಿ ಜಲಾಶಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ಮೊದಲ ಭಾಗವಾಗಿ ಅಂದು ಹಮ್ಮಿಕೊಂಡಿದ್ದ ಪ್ರಯೋಗಿಕ ಪ್ರಯತ್ನ ಅಂದಿಗೇ ಮುಕ್ತಯವಾಯಿತು. ಅಂದಿನ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಅನಿತಾ ವರ್ಗಾವಣೆಯಾದ ಬಳಿಕ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಕಾರ್ಯ ಮುಂದುವರೆಯಲಿಲ್ಲ.

ಈ ಕುರಿತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಉಪ ನಿದೇರ್ಶಕ ಶಿವಸ್ವಾಮಿ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಸುವರ್ಣಾವತಿ ಜಲಾಶಯದಲ್ಲಿ ಈ ಹಿಂದೆ ಬೋಟಿಂಗ್ ಮತ್ತು ಜಲ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಈ ಯೋಜನೆಯನ್ನು ಜಾರಿಗೊಳಿಸುವ ಪ್ರಕ್ರಿಯೆ ಏನಾಗಿದೆ ಎಂದು ತಿಳಿದುಕೊಂಡು ಮಾಹಿತಿ ನೀಡುತ್ತೇನೆ ಎಂದಿದ್ದಾರೆ.

ವಾರಾಂತ್ಯದಲ್ಲಿ ಪ್ರವಾಸಿಗರ ದಂಡು:
ಸುವರ್ಣಾವತಿ ಜಲಾಶಯದ ಪಾಲಿಗೆ ಅಭಿವೃದ್ಧಿ ಎನ್ನುವುದೇ ಮರೀಚಿಕೆಯಾಗಿದೆ. ಜಲಾಶಯದ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಬಿದ್ದ ಮಳೆ ನೀರು ಸಂಗ್ರಹವಾಗಿ, ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಪ್ರದೇಶವನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ 500ಕ್ಕೂ ಹೆಚ್ಚು ಜನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ತಮಿಳುನಾಡಿಗೆ ಹೋಗುವ ಮತ್ತು ಬರುವ ಪ್ರವಾಸಿಗರು ಸುವರ್ಣಾವತಿ ಜಲಾಶಯದ ಬಳಿ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಾರೆ. ಇಂತಹ ಪ್ರಸಿದ್ಧ ಸ್ಥಳವನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಸುತ್ತಮುತ್ತಲಿನ ಗ್ರಾಮಗಳ ಜನರು ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾರೆ. ಆರ್ಥಿಕ ವಹಿವಾಟು ಹೆಚ್ಚಾಗುತ್ತದೆ. ಬೋಟಿಂಗ್ ಮತ್ತು ಜಲ ಕ್ರೀಡೆ ಶುರು ಮಾಡಿದ್ದರೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿತ್ತು. ತೆಪ್ಪದಲ್ಲಿ ಪ್ರಯಾಣಿಸುವ ಅನುಭವಕ್ಕಾಗಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಮೀಪದ ಹೊಗೇನಕಲ್‌ಗೆ ಪ್ರವಾಸಿಗರು ಹೋಗುತ್ತಾರೆ. ಈ ರೀತಿಯ ಅನುಭವಕ್ಕಾಗಿ ಅಲ್ಲಿಯವರೆಗೂ ಹೋಗುವವರನ್ನು ಸುವರ್ಣಾವತಿ ಜಲಾಶಯದತ್ತಲೂ ಬರುವಂತೆ ಮಾಡಲು ಜಲ ಕ್ರೀಡೆ ಮತ್ತು ಬೋಟಿಂಗ್ ಉಪಯೋಗಕಾರಿಯಾಗಲಿದೆ. ಈ ಯೋಜನೆಯನ್ನು ಜಾರಿಗೊಳಿಸಿದರೆ ಹೊರಜಿಲ್ಲೆಯ ಪ್ರವಾಸಿಗರು ಮಾತ್ರವಲ್ಲ, ಚಾಮರಾಜನಗರ ತಾಲೂಕಿನ ಸ್ಥಳೀಯರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತದೆ. ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹೀಗಾಗಿ ಜಿಲ್ಲಾಡಳಿತ ಮರೆತುಹೋಗಿರುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವತ್ತ ಗಮನಹರಿಸಬೇಕಿದೆ.

ಜಲಾಶಯ ಅಭಿವೃದ್ಧಿಗಾಗಿ 22 ಕೋಟಿ ರೂ. ಯೋಜನೆ:
ಸುವರ್ಣಾವತಿ ಜಲಾಶಯ ಅಭಿವೃದ್ಧಿಗಾಗಿ 22 ಕೋಟಿ ರೂ. ವೆಚ್ಚದ ಯೋಜನೆಯನ್ನು ಜಾರಿಗೊಳಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಲಾಶಯ ಪುನರ್‌ನಿರ್ಮಾಣ ಅಭಿವೃದ್ಧಿ ಕಾರ್ಯಕ್ಕಾಗಿ ನೀಡುವ ಅನುದಾನವನ್ನು ಜಲಾಶಯದ ಇಂಜಿನಿಯರ್‌ಗಳು ಕೋರಿದ್ದಾರೆ. ಈ ಅನುದಾನ ಸಿಕ್ಕರೆ ಜಲಾಶಯದ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ. ಇದೂ ಸಹ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ.

ಜಲ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ:
ಮಳೆಯಾಶ್ರಿತ ಪ್ರದೇಶವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಲಭ್ಯವಿರುವ ನೀರಾವರಿ ಪ್ರದೇೀಶಗಳಲ್ಲಿ ಜಲ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಬೇಕಿದೆ.
ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರಗಳಾಗಿರುವ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಅರಣ್ಯಗಳಾದ ಬಂಡೀಪುರ, ಬಿಆರ್‌ಟಿಗೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿತ್ತಾರೆ. ಪ್ರವಾಸಿಗರಿಗೆ ನೀರು ಹರಿಯುವ ಜಾಗಗಳೆಂದರೆ ಅಚ್ಚುಮೆಚ್ಚು. ಚಿಕ್ಕಹೊಳೆ ಜಲಾಶಯ ಮತ್ತು ಸುವರ್ಣಾವತಿ ಜಲಾಶಯದಲ್ಲಿ ಬೋಟಿಂಗ್ ಆರಂಭಿಸಿದರೆ ಪ್ರವಾಸಿಗರನ್ನು ಸೆಳೆಯಬಹುದಾಗಿದೆ.

ಸುವರ್ಣಾವತಿ ಜಲಾಶಯದಲ್ಲಿ ಜಲ ಕ್ರೀಡೆ ಮತ್ತು ಬೋಟಿಂಗ್ ಆರಂಭಿಸುವ ಯೋಜನೆ ಜಾರಿ ಕುರಿತು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರ ಗಮನಕ್ಕೆ ತರಲಾಗುವುದು. ಬಳಿಕ ಮುಂದಿನ ಕ್ರಮ ವಹಿಸುತ್ತೇವೆ.-ವಿಜಯ್‌ಕುಮಾರ್, ಪ್ರಭಾರ ಸಹಾಯಕ ನಿರ್ದೇಶಕ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net