ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪು

01chn13
Published on

ಚಾಮರಾಜನಗರ : ಕರ್ನಾಟಕ ರೂಪುಗೊಂಡ ಬಗೆಯನ್ನು ಅರಿವಿಗೆ ತಂದ ಖ್ಯಾತ ಕವಿಗಳ ಕನ್ನಡದ ಗೀತೆಗಳು, ಎಲ್ಲರನ್ನೂ ಆಕರ್ಷಿಸಿದ ಪಥಸಂಚಲನ, ಕನ್ನಡ ಕಂಪು ಸೂಸಿದ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಂಗಮ ಕರ್ನಾಟಕ ರಾಜ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದವು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗೃಹರಕ್ಷಕ ದಳ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ನಾಡಿನ ಹೆಸರಾಂತ ಕವಿಗಳ 5 ಗೀತೆಗಳ ಗಾಯನ ನಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವದ ಶುಭ ಸಂದೇಶ ಸಾರಿದ ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ರಾಜ್ಯೋತ್ಸವ ಆಚರಣೆಯ ಹಿಂದಿನ ಕಥೆ ರೋಚಕವಾಗಿದೆ. 1905ರಲ್ಲಿ ಪ್ರಾರಂಭವಾದ ಕರ್ನಾಟಕ ಏಕೀಕರಣ ಚಳವಳಿಯ ಲವಾಗಿ ಮೈಸೂರು ರಾಜ್ಯವು ಉದಯವಾಯಿತು. 1973 ನ.1 ರಂದು ಕರ್ನಾಟಕ ಎಂದು ಮರುನಾಮಕರಣವಾಯಿತು. ಕನ್ನಡ ನಾಡು ವಿಶಿಷ್ಟವಾದ ಸಂಸ್ಕೃತಿ, ಕಲೆ, ಸಾಹಿತ್ಯ, ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ವಿವಿಧತೆಯಲ್ಲೂ ಏಕತೆಯನ್ನು ಸಾಧಿಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಕನ್ನಡ ಭಾಷೆಯೊಳಗಿನ ಸರ್ವಾಂಗೀಣ ಗುಣಗಳಿಂದ ಕೇಂದ್ರ ಸರ್ಕಾರ ಕನ್ನಡವನ್ನು ಶಾಸೀಯ ಭಾಷೆಯಾಗಿ ೋಷಿಸಿದೆ. ಕನ್ನಡ ಶ್ರೇಷ್ಠತೆಯ ದ್ಯೋತಕವಾಗಿ 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಬಂದಿದೆ. ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಅನೇಕ ಮಹನೀಯರು ಈ ನಾಡಿಗಾಗಿ ವಿಶೇಷ ಕೊಡುಗೆ ನೀಡಿದ್ದಾರೆ. ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಈ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ವರ್ಷವಿಡೀ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಾಡಿಗೆ ಜಿಲ್ಲೆಯ ಕೊಡುಗೆ ಅಪಾರ
ಕನ್ನಡ ಭಾಷೆಯ ವಿಷಯದಲ್ಲಿ ಚಾಮರಾಜನಗರ ಒಂದು ‘ಭಾಷೆಯ ತೊಟ್ಟಿಲು ಇದ್ದಂತೆ’ ಎಂದು ಕನ್ನಡ ನಾಡಿಗೆ ಜಿಲ್ಲೆಯ ಕೊಡುಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೇಂಕಟೇಶ್ ಬಣ್ಣಿಸಿದರು.
ಜಿಲ್ಲೆಯಲ್ಲಿ ಗಟ್ಟಿ ಕನ್ನಡ ಭಾಷೆ ಆಡುವ ಜನಸಮೂಹ ಇದ್ದು, ನೆರೆ ರಾಜ್ಯಗಳ ಆಳ್ವಿಕೆಯ ಒತ್ತಡಕ್ಕೆ ಸಿಲುಕಿಕೊಂಡರೂ ಕನ್ನಡವನ್ನು ಬಿಡದೆ ನೆರೆಹೊರೆಯ ಅನ್ಯ ಭಾಷೆಗಳಿಗೆ ಪ್ರಭಾವಿತರಾಗದಿರುವುದು ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯ ಬುಡಕಟ್ಟು ಜನರ ಸಾಹಿತ್ಯ, ಸಂಗೀತ ಮತ್ತು ಜಾನಪದ ಸಂಪತ್ತು ನಾಡಿಗಲ್ಲದೆ ಜಗತ್ತಿಗೆ ಅಪಾರವಾದ ಕೊಡುಗೆ ನೀಡಿದೆ. ಇಲ್ಲಿನ ಸಾಹಿತಿಗಳು ಕನ್ನಡ ಕಾವ್ಯ, ಕಾದಂಬರಿ, ನಾಟಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ಕೊಟ್ಟಿದ್ದಾರೆ. ಜಿಲ್ಲೆಯವರೇ ಆದ ಮೇರುನಟ ಡಾ.ರಾಜ್‌ಕುಮಾರ್, ಲೇಖಕ ಜಿ.ಪಿ.ರಾಜರತ್ನಂ, ಕವಯತ್ರಿ ಸಂಚಿಯ ಹೊನ್ನಮ್ಮ ಮುಂತಾದವರ ಸೇವೆ ಸ್ಮರಣೀಯ. ಈ ಬಾರಿಯ ಮೈಸೂರು ದಸರಾ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಚಾಮರಾಜನಗರ ಜಿಲ್ಲೆಯ ಜಾನಪದ ಕಲೆಗಳ ಮತ್ತು ನೈಸರ್ಗಿಕ ಸಂಪತ್ತಿನ ಸ್ತಬ್ಧಚಿತ್ರ ಆಯ್ಕೆಗೊಂಡು ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ಗಮನ ಸೆಳೆದ ಗೀತಗಾಯನ:
ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಕಾರ್ಯಕ್ರಮದ ಅಂಗವಾಗಿ ನಾಡಿನ ಹೆಸರಾಂತ ಕವಿಗಳ 5 ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.
ಹುಯಿಲಗೋಳ ನಾರಾಯಣರಾಯರು ರಚನೆಯ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ರಚಿತ ಎಲ್ಲಾದರೂ ಇರು ಎಂತಾದರು ಇರು, ದ.ರಾ.ಬೇಂದ್ರೆ ವಿರಚಿತ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕ ಬರೆದಿರುವ ಹೊತ್ತಿತೋ ಹೊತ್ತಿತು ಕನ್ನಡ ದೀಪ ಹಾಗೂ ಚಿನ್ನವೀರ ಕಣವಿ ರಚನೆಯ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಗೀತೆಗಳನ್ನು ಗಾಯಕ ರಾಜಪ್ಪ ಮತ್ತು ತಂಡದವರು ಹಾಡುವ ಮೂಲಕ ಗಮನ ಸೆಳೆದರು.

ಆಕರ್ಷಕ ಪಥಸಂಚಲನ:
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥಸಂಚಲನ ಆಕರ್ಷಕವಾಗಿ ಮೂಡಿ ಬಂದಿತು. ಜಿಲ್ಲಾ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಸಂತೋಲ್ ಪ್ರೌಢಶಾಲೆ, ಸಂತ ಜೋಸ್ೆ ಪ್ರೌಢಶಾಲೆ, ಸೇವಾಭಾರತಿ ಪ್ರೌಢಶಾಲೆ, ಜೆಎಸ್‌ಎಸ್ ಪ್ರೌಢಶಾಲೆ, ಬಂಜಾರಾ, ಆದರ್ಶ ವಿದ್ಯಾಲಯ ಹಾಗೂ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ಬ್ಯಾಂಡ್ ವೃಂದ ಪಥಸಂಚಲನಕ್ಕೆ ಮತ್ತಷ್ಟು ಮೆರಗು ನೀಡಿದರು. ಆರಕ್ಷಕ ನಿರೀಕ್ಷಕ ರಂಗಸ್ವಾಮಿ ಕನ್ನಡದಲ್ಲಿ ಕಾವಾಯತು ನಡೆಸಿಕೊಡುವ ಮೂಲಕ ಕನ್ನಡದ ಕಂಪು ಸೂಸಿದರು.

ಕಣ್ಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:
ನಗರದ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಕನ್ನಡನಾಡು, ನುಡಿ ಹಾಗೂ ವೈಶಿಷ್ಟೃಗಳನ್ನು ಅನಾವರಣಗೊಳಿಸುವ ಮೂಲಕ ನೋಡುಗರ ಕಣ್ಮನ ಸೆಳೆಯಿತು. ಸಂತೋಲ್ ವಿದ್ಯಾಸಂಸ್ಥೆ, ಸೆಂಟ್ ್ರಾನ್ಸಿಸ್ ಪ್ರೌಢಶಾಲೆ, ಸೇವಾಭಾರತಿ ಹಾಗೂ ಧೀನಬಂಧು ಶಾಲೆಯ ವಿದ್ಯಾರ್ಥಿಗಳು ಕನ್ನಡದ ಕಂಪು ಸೂಸುವ ವಿವಿಧ ಚಲನಚಿತ್ರಗೀತೆಗಳಿಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net