

ಚಾಮರಾಜನಗರ: ಗುಂಡ್ಲುಪೇಟೆ ನೂತನ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಸನ್ಮಾನ, ಅಭಿನಂದನೆ ಸಂದರ್ಭದಲ್ಲಿ ಹೂವಿನ ಹಾರದ ಬದಲು ಸ್ವೀಕರಿಸಿದ ಪುಸ್ತಕಗಳನ್ನು ವಿದ್ಯಾರ್ಥಿನಿಯರಿಗೆ ವಿತರಣೆ ಮಾಡಿದರು.
ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ ವೀರಶೈವ-ಲಿಂಗಾಯಿತ ಮುಖಂಡರು ಮತ್ತು ಯುವಕರು ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ತೋಟದಪ್ಪ ಹೆಣ್ಣು ಮಕ್ಕಳ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ನನ್ನ ಸನ್ಮಾನಕ್ಕೆ ಹಾರ, ತುರಾಯಿಗಳನ್ನು ತರಬೇಡಿ. ಆ ಹಣದಲ್ಲೇ ಶಿಕ್ಷಣಕ್ಕೆ ಅನುಕೂಲವಾಗುವ ಸಾಮಗ್ರಿಗಳನ್ನು ತಂದು ಬಡ ವಿದ್ಯಾರ್ಥಿಗಳಿಗೆ ನೀಡಿ ಎಂದಿದ್ದೆ. ಅದರಂತೆ ಯುವ ಮುಖಂಡರು, ಪುಸ್ತಕ, ಲೇಖನ ಸಾಮಗ್ರಿಗಳನ್ನು ತಂದು ಗುಬ್ಬಿ ತೋಟದಪ್ಪ ಹೆಣ್ಣು ಮಕ್ಕಳ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ವಿತರಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಜನರು ಒಳ್ಳೆಯ ಕಾರ್ಯಗಳಿಗೆ ಸ್ಪಂದಿಸುತ್ತಾರೆ ಎನ್ನುವುದಕ್ಕೆ ನನ್ನ ತಂದೆ ಎಚ್.ಎಸ್. ಮಹದೇವಪ್ರಸಾದ್ ಮರಣ ಹೊಂದಿದಾಗ ಸೇರಿದ್ದ ಜನಸ್ತೋಮ ಮತ್ತು ನಮ್ಮ ಕುಟುಂಬಕ್ಕೆ ಹೇಳಿದ ಸಾಂತ್ವನ ಮತ್ತು ಧೈರ್ಯವೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ನಾನು ನನ್ನ ತಂದೆ ಇರುವತನಕ ರಾಜಕೀಯದಿಂದ ದೂರವೇ ಇದ್ದೆ. ನನ್ನ ತಾಯಿಯ ಅನಾರೋಗ್ಯದ ಕಾರಣ ರಾಜಕೀಯಕ್ಕೆ ಬರಬೇಕಾಯಿತು. ಅಂದೇ ನನ್ನ ತಂದೆಯ ಹಾದಿಯಲ್ಲಿ ಸಾಗಬೇಕು, ಜನಸೇವೆ ಮಾಡಬೇಕು ಎಂದು ನಿರ್ಧರಿಸಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ, ಮಠ ಮಾನ್ಯಗಳ ಸಮಾಜದ ಕೆಲಸಗಳಿಗೆ ನನ್ನ ಕೈಲಾದ ಸಹಾಯ ಮಾಡುತ್ತಾ ಬಂದೆ. ಅದರ ಫಲವೇ ಈ ಚುನಾವಾಣೆಯಲ್ಲಿ ಕೈ ಹಿಡಿದು ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದರು.
ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀಚನ್ನಬಸವಸ್ವಾಮೀಜಿ ಮಾತನಾಡಿ, ಗಣೇಶ್‌ಪ್ರಸಾದ್ ಸಮಾಜಕ್ಕೆ ಮತ್ತಷ್ಟು ಒಳ್ಳೆಯ ಕೆಲಸಗಳು ಆಗಲಿ ಎಂದು ಆಶಿಸಿದರು. ಶ್ರೀಮಠದ ವತಿಯಿಂದ ಹಾಗೂ ಅಭಿಮಾನಿಗಳಿಂದ ಗಣೇಶ್‌ಪಸಾದ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಗೌಡಹಳ್ಳಿ ಮಠದ ಮರಿತೋಂಟದಾರ್ಯ ಸ್ವಾಮಿ, ರಾಜಶೇಖರ ಸ್ವಾಮೀಜಿ, ಮುಖಂಡರಾದ ಉಡೀಗಾಲ ಕುಮಾರಸ್ವಾಮಿ, ಪಿ.ಮರಿಸ್ವಾಮಿ, ಪುಟ್ಟಮಲ್ಲಪ್ಪ, ಬಿ.ಕೆ. ರವಿಕುಮಾರ್, ನಟೇಶ್, ಬಿಸಲವಾಡಿ ಉಮೇಶ್, ಚಂದ್ರಪ್ಪ, ಗುರುಸ್ವಾಮಿ, ಸೋಮಲಿಂಗಪ್ಪ, ಸೋಮಶೇಖರ್, ಪ್ರಸಾದ್, ಬಸವರಾಜು, ರಾಮಸಮುದ್ರ ಬಾಬು, ಹೊಸೂರು ಜಗದೀಶ್, ಸುನೀಲ್, ಸಂಪತ್ ಇತರರು ಭಾಗವಹಿಸಿದ್ದರು.