ಸಿಮ್ಸ್ ಹೊರಗುತ್ತಿಗೆ ನೌಕರರ ಪ್ರತಿಭಟನೆ

Published on

ಚಾಮರಾಜನಗರ : ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ವೇತನ ಮತ್ತು ಇನ್ನಿತರ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಬೇಕು ಎಂದು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮೇಟಿ ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬುಧವಾರ ಜಮಾಯಿಸಿದ್ದ ಸಿಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ 4 ವರ್ಷಗಳಿಂದಲೂ ಸಿಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಗುತ್ತಿಗೆ ಪಡೆದಿರುವ ಶ್ರೀವ್ನಿೇಶ್ವರ ಸೆಕ್ಯುರಿಟಿ ಏಜೆನ್ಸಿ 400 ಜನರಿಗೆ ಬಿಲ್ ಮಾಡುತ್ತಿದ್ದಾರೆ. ಆದರೆ, ಅಲ್ಲಿ 250 ಜನರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ನೌಕರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೋದಾಗ ಅವರಿಗೆ ಬೆದರಿಸಿ ಕೆಲಸ ಮಾಡಿಸಲಾಗುತ್ತಿದೆ. ಗುತ್ತಿಗೆದಾರ ದೊಡ್ಡ ಮಟ್ಟದಲ್ಲಿ ಅನ್ಯಾಯ ಎಸಗುತ್ತಿದ್ದಾನೆ, ಆತನ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನೌಕರರ ಮೇಲೆ ಅಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ. ಸಮಸ್ಯೆ ಕೇಳಲು ಹೋದ 5 ಜನರ ಮೇಲೆ ಎ್ಐಆರ್ ದಾಖಲು ಮಾಡಿ, ಒಬ್ಬರನ್ನು ಬಂಧಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದರು.

ಒಬ್ಬರ ಬಂಧನ: ಸಿಮ್ಸ್ ಡೀನ್ ಮಂಜುನಾಥ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಐವರ ವಿರುದ್ಧ ಎ್ಐಆರ್ ದಾಖಲಿಸಿ, ಬೀರೇಗೌಡ ಎಂಬಾತನನ್ನು ಬಂಧಿಸಲಾಗಿದೆ.
ವೇತನ ವಿಭಾಗಕ್ಕೆ ಸಂಬಂಧಿಸಿದ ಹೊರಗುತ್ತಿಗೆ ಕಂಪ್ಯೂಟರ್ ಆಪರೇಟರ್ ನಿಶಾ ಕಚೇರಿಗೆ ಅನಧಿಕೃತ ಗೈರು ಹಾಜರಾಗಿ ಕೆಲಸ ನಿರ್ವಹಣೆಯಲ್ಲಿ ಅನೇಕ ಲೋಪ ಮಾಡಿದ್ದರು. ಹಾಗಾಗಿ ಸಂಸ್ಥೆಯ ಬೋಧನಾ ಆಸ್ಪತ್ರೆ ಕಚೇರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಮೌಖಿಕವಾಗಿ ಡೀನ್ ತಿಳಿಸಿದ್ದರು. ಈ ಬಗ್ಗೆ ಅ.30 ರಂದು ನೌಕರರಾದ ಮಹದೇವ್, ನಿಶಾ, ವಿನಯ್, ಮಹೇಶ್ ಮತ್ತು ಬೀರೇಗೌಡ ಅವರು ಯಾವುದೇ ಅನುಮತಿ ಪಡೆಯದೆ ಡೀನ್ ಕೊಠಡಿ ಪ್ರವೇಶ ಮಾಡಿ, ಡೀನ್‌ಗೆ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು ಎಂದು ಎ್ಐಆರ್‌ನಲ್ಲಿ ದಾಖಲಿಸಲಾಗಿದೆ.

ಉಸ್ತುವಾರಿ ಸಚಿವರ ಭೇಟಿ: ಸಿಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು. ಈ ಸಂದರ್ಭ ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯಿಸಿ, ಗುತ್ತಿಗೆ ನೌಕರರು ದಬ್ಬಾಳಿಕೆ ಮಾಡಿದರೆ ಅಂಥವರ ವಿರುದ್ಧ ಕ್ರಮವಹಿಸಿ. ನೌಕರರ ವೇತನ ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮುಂದಿನ ವಾರದಲ್ಲಿ ಹೊರಗುತ್ತಿಗೆ ನೌಕರರ ಸಭೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿದರು. ಎಸ್ಪಿ ಪದ್ಮಿನಿಸಾಹು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net