

ಚಾಮರಾಜನಗರ: ಭಾರತೀಯ ಸಂಸ್ಕೃತಿಯಲ್ಲಿ ಧರ್ಮರಕ್ಷಣೆ ಹಾಗೂ ದುಷ್ಟ ಶಕ್ತಿಗಳ ನಿವಾರಣೆ ಮಾಡಿದ ಮಹಾನ್ ಪುರುಷರ ಸಾಲಿನಲ್ಲಿ ಶ್ರೀರಾಮ ಮೊದಲಿಗ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್.ಋಗ್ವೇದಿ ಹೇಳಿದರು.
ನಗರದ ಶಂಕರಪುರ ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ತಿನ ಸಹಕಾರದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಶ್ರೀರಾಮನಾಮ ಜಪ ಮಹಾಯಜ್ಞ ಹಾಗೂ ತಾರಕ ಯಜ್ಞ ಜಪ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀರಾಮನಾಮ ಸ್ಮರಣೆಯಿಂದ ಮನುಷ್ಯ ಜನ್ಮವು ಸಾರ್ಥಕವಾಗುತ್ತದೆ. ಜಾತಿ, ಮತ, ಪಂಥ ಭೇದವಿಲ್ಲದೆ ಸರ್ವರೂ ಶ್ರೀರಾಮನಾಮ ಸ್ಮರಣೆಯನ್ನು ಮಾಡಬೇಕು ಶ್ರೀರಾಮ ನಾಮಸ್ಮರಣೆ ಮನುಷ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸಿ ,ಆಧ್ಯಾತ್ಮಿಕ ಶಕ್ತಿಯನ್ನು ತುಂಬುತ್ತದೆ. ಪ್ರತಿಯೊಬ್ಬರು ರಾಮನಾಮ ಜಪವನ್ನು ಮಾಡುವ ಮೂಲಕ ನೆಮ್ಮದಿಯನ್ನು ಶಾಂತಿಯನ್ನು ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಖಜಾಂಚಿ ಎಸ್.ಬಾಲಸುಬ್ರಮಣ್ಯ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ ಹಾಗೂ ಲೋಕದ ಸಮಸ್ತರಿಗೂ ಕಲ್ಯಾಣವಾಗಲಿ ಎಂಬ ಆಶಯದೊಂದಿಗೆ ಶತಕೋಟಿ ಶ್ರೀ ರಾಮನಾಮ ಜಪ ಯಜ್ಞವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆರಂಭಿಸಿದೆ. ಜಿಲ್ಲೆಯ ಸಮಸ್ತ ಜನರು ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭೆಯ ಪ್ರತಾಪ್, ಸತೀಶ್, ಕೇಶವ ಮೂರ್ತಿ , ಚೈತನ್ಯ ಹೆಗಡೆ, ಸುದರ್ಶನ್,ರಂಗನಾಥ್, ನಾಗಸುಂದರ್, ನಾಗೇಂದ್ರ, ರಾಜಗೋಪಾಲ್ ,ಮಹಿಳಾ ಸಂಘದ ವತ್ಸಲ ರಾಜಗೋಪಾಲ್, ಕುಸುಮ ಋಗ್ವೇದಿ, ವಿಜಯಲಕ್ಷ್ಮಿ, ಗಾಯತ್ರಿ ,ವಾಣಿಶ್ರೀ, ನಾಗಶ್ರೀ, ಮಾಲಾ, ಪದ್ಮಿನಿ, ಸುಧಾ, ಶ್ರಾವ್ಯ, ಶರಣ್ಯ ಋಗ್ವೇದಿ ಹಾಗೂ ಇತರರು ಹಾಜರಿದ್ದರು.