ಅಣಕು ಪುಟ್ಬಾಲ್ ಆಡಿ ವಿನೂತನ ಪ್ರತಿಭಟನೆ

26chn1
Published on

ಚಾಮರಾಜನಗರ: ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ವತಿಯಿಂದ ಅಣಕು ಪುಟ್ಬಾಲ್ ಆಟ ಆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ಚರ ಉದ್ಯಾನವನದ ಮುಂಭಾಗ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು ಪುಟ್ಬಾಲ್ ಹಿಡಿದು ಅಲ್ಲಿಂದ ಮೆರವಣಿಗೆ ಹೊರಟು, ಶ್ರೀಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಣಕು ಪುಟ್ಬಾಲ್ ಆಟ ಪ್ರದರ್ಶಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ,
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರವುದನ್ನು ಖಂಡಿಸಿ ಕಳೆದ 44 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ನಮ್ಮನ್ನು ಆಳುವ ಸರ್ಕಾರಗಳು ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ಕಾವೇರಿ ವಿಚಾರದಲ್ಲಿ ಪುಟ್ಬಾಲ್ ಆಟದ ರೀತಿಯಲ್ಲಿ ಚೆಂಡಾಟ ಆಡುತ್ತಿವೆ ಎಂದು ದೂರಿದರು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕರ್ನಾಟಕದ ಪಾಲಿಗೆ ನ್ಯಾಯ ದೊರಕಿಸಿಕೊಡಬೇಕು. ಕರ್ನಾಟಕ ಸರ್ಕಾರ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್, ಮಹೇಶ್‌ಗೌಡ, ನಿಜಧ್ವನಿಗೋವಿಂದರಾಜು, ಲಿಂಗರಾಜು, ತಾಂಡವಮೂರ್ತಿ, ಗು.ಪುರುಷೋತ್ತಮ್, ಬಸವರಾಜುನಾಯಕ, ಚಾ.ಹ.ರಾಮು, ವೀರಭದ್ರ,ರಾಜಪ್ಪ, ಮೂಡ್ಲಪುರ ಪ್ರಕಾಶ್, ಸೋಮವಾರಪೇಟೆ ಮಂಜು, ಮಿಮಿಕ್ರಿ ಮಲ್ಲಣ್ಣ, ಚಾ.ಸಿ.ಸಿದ್ದರಾಜು ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net