ಕೇಂದ್ರ ಪುರಸ್ಕೃತ ಅಮೃತ-2 ಯೋಜನೆಗೆ ಭೂಮಿಪೂಜೆ

26chn3
Published on

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರು ಮತ್ತು ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಸೂಕ್ತರೀತಿಯ ಕ್ರಮ ವಹಿಸಲಾಗುವುದು ಎಂದು ಶಾಸಕ.ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ರಾಮಸಮುದ್ರ ಬಡಾವಣೆಯ ನೀರಿನ ಟ್ಯಾಂಕ್‌ಬಳಿ ಕೇಂದ್ರ ಪುರಸ್ಕೃತ ಅಮೃತ-2 ಕಾರ್ಯಕ್ರಮದಡಿ ಗುರುವಾರ ಹಮ್ಮಿಕೊಂಡಿದ್ದ ಚಾಮರಾಜನಗರದ ನೀರು ಸರಬರಾಜು ವ್ಯವಸ್ಥೆಯ ಸುಧಾರಣೆ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರು ಪೂರೈಕೆಗೆ ಅಮೃತ-2.0 ಯೋಜನೆಯಡಿ 120 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಕ್ರಿಯಾ ಯೋಜನೆ ತಯಾರಿಸಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಟಿ.ನರಸೀಪುರದಿಂದ ಮಂಗಲ ಗ್ರಾಮದ ತನಕ ನೀರು ಪೂರೈಕೆಯಾಗುವ ಪೈಪ್‌ಲೈನ್ ರಿಪೇರಿಗೆ ಕ್ರಮವಹಿಸಲಾಗಿದೆ. ಚಾಮರಾಜನಗರ ಹಾಗೂ ಮಾರ್ಗ ಮಧ್ಯದ 8 ಹಳ್ಳಿಗಳಿಗೆ ಟಿ.ನರಸೀಪುರ ಪಟ್ಟಣದ ಬಳಿ ಕಪಿಲಾ ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಯೋಜನೆಯನ್ನು 2021ರ ಜನಸಂಖ್ಯೆಗೆ ಅನುಗುಣವಾಗಿ ವಿನ್ಯಾಸಿಸಿ 15 ಎಂಎಲ್ ಡಿ ಸಾಮರ್ಥ್ಯದ ವ್ಯವಸ್ಥೆಯನ್ನು 2489 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ಚಾಲನೆಗೊಳಿಸಲಾಗಿದ್ದು ನಿರ್ವಹಣೆ ನಡೆಯುತ್ತಿದೆ ಎಂದರು.

ನಗರದಲ್ಲಿ 2-3 ದಿನಗಳಿಗೊಮ್ಮೆ ತಲಾವಾರು 100 ಲೀ. ನಂತೆ ನೀರು ಸರಬರಾಜು ಮಾಡಲಾಗುತ್ತಿದೆ. ಅಮೃತ್ -2.0 ಕಾರ್ಯಕ್ರಮದಡಿ ನೀರು ಸರಬರಾಜು ವ್ಯವಸ್ಥೆಯನ್ನು ಸುಧಾರಿಸುವ ಯೋಜನೆಗೆ ಸರ್ಕಾರದಿಂದ ಅಡಳಿತಾತ್ಮಕ ಅನುಮೋದನೆ ದೊರೆತಿದೆ. ಏರು ಕೊಳವೆ ಮಾರ್ಗದ ಒಟ್ಟು 12.95 ಕಿ.ಮೀ ಉದ್ದದ ಪೈಕಿ ಹೆಚ್ಚಿನ ಒತ್ತಡವಿರುವ ಹಾಗೂ ಹೆಚ್ಚಿನ ಸೋರಿಕೆ ಕಂಡುಬರುತ್ತಿರುವ ಸ್ಥಳಗಳಲ್ಲಿ ಕೊಳವೆ ಮಾರ್ಗದ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಾಜಪ್ಪ, ಆರ್.ಪಿ.ನಂಜುಂಡಸ್ವಾಮಿ, ಪೌರಾಯುಕ್ತ ರಾಮದಾಸ್, ಯಜಮಾನರಾದ ಚನ್ನಂಜಯ್ಯ, ರೇವಣ್ಣ, ಮಹದೇವಸ್ವಾಮಿ, ಮುಖಂಡರಾದ ಕೆ.ನಾಗರಾಜ್, ಪಾಪಣ್ಣ, ನಾಗರಾಜ್, ರಾಮು, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಮೋಹನ್(ನಗು), ಕಾರ್ಯದರ್ಶಿ ಅಕ್ಷಯ್, ಸ್ವಾಮಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net