

ಚಾಮರಾಜನಗರ: ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಿದ್ದ ಸೋಲಾರ್ ಬೀದಿದೀಪಗಳು ಅಸಮರ್ಪಕ ನಿರ್ವಹಣೆಯಿಂದ ಕೆಟ್ಟುನಿಂತದ್ದು, ನಗರಸಭೆಯ ಬೇಜವಾಬ್ದಾರಿ ನಡೆಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.
ಚಾ.ನಗರದ ನಗರಸಭೆ ವ್ಯಾಪ್ತಿಯಲ್ಲಿರುವ 30 ವಾರ್ಡ್‌ಗಳ ಪ್ರಮುಖ ರಸ್ತೆಗಳಲ್ಲಿ ನಗರಸಭೆಯ ವಿಶೇಷ ಅನುದಾನದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ವಾರ್ಡ್‌ಗಳಲ್ಲೂ ಇರುವ ಎಲ್ಲಾ ಸೋಲಾರ್ ಬೀದಿದೀಪಗಳು ನಗರಸಭೆ ಸಿಬ್ಬಂದಿಗಳಿಂದ ಸೂಕ್ತ ನಿರ್ವಹಣೆ ಕಾಣದೇ ಸುಮಾರು ಎರಡು ವರ್ಷಗಳಿಂದ ಸಂಪೂರ್ಣವಾಗಿ ಕೆಟ್ಟುನಿಂತಿವೆ. ಸಾಕಷ್ಟು ಸೋಲಾರ್ ಕಂಬಗಳು ತುಕ್ಕು ಹಿಡಿದಿದ್ದು, ಹಲವು ಕಂಬಗಳಲ್ಲಿ ಸೋಲಾರ್ ಬೀದಿದೀಪಕ್ಕೆ ಅಳವಡಿಸಿದ್ದ ಬ್ಯಾಟರಿಗಳು ಹಾಳಾಗಿವೆ. ಮತ್ತಷ್ಟು ಕಂಬಗಳಲ್ಲಿ ಅಳವಡಿಸಿದ್ದ ಬ್ಯಾಟರಿಗಳು ಇಲ್ಲದಂತಾಗಿದೆ. ಹಲವು ಕಂಬಗಳಲ್ಲಿ ದೀಪಗಳು ಇಲ್ಲದೇ ಬರಿಯ ಕಂಬಗಳು ಮಾತ್ರ ಉಳಿದಿದೆ. ಹಲವು ವಾರ್ಡ್‌ಗಳಲ್ಲಿ ನೆಪಮಾತ್ರಕ್ಕೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದ್ದಾರೆಯೇ ಹೊರತು ಈ ವರೆಗೂ ದೀಪಗಳು ಉರಿದಿಲ್ಲ ಎಂದು ಸಾರ್ವಜನಿಕರು ನಗರಸಭೆಯ ಅವ್ಯವಸ್ಥೆಗೆ ಬೇಸರ ವ್ಯಕ್ತಪಡಿಸುತ್ತಾರೆ.
ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಉಂಟಾಗಿದೆ, ವಿದ್ಯುತ್‌ಗಾಗಿ ಸಾಕಷ್ಟು ಹೋರಾಟಗಳೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸೋಲಾರ್ ದೀಪಗಳು ಎಷ್ಟೊಂದು ಅಗತ್ಯವಾಗಿದೆ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸೋಲಾರ್ ದೀಪಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಾದ ನಗರಸಭೆ ಸೋಲಾರ್ ಬೀದಿದೀಪಗಳ ನಿರ್ವಹಣೆ ಮಾಡದೇ ಎಲ್ಲವೂ ಹಾಳಾಗಿದೆ. ರಾತ್ರಿ ಸಮಯದಲ್ಲಿ ಇದರಿಂದಾಗಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ. ನಗರದ ಹಲವು ಬೀದಿಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ ಬೀದಿದೀಪಗಳು ಇಲ್ಲದೇ ಅಪಘಾತಗಳು ಹೆಚ್ಚಾಗಿ ಸಂಭವಿಸುವಂತಾಗಿದೆ. ಸೋಲಾರ್ ಬೀದಿದೀಪಗಳನ್ನು ಅಳವಡಿಸಿ ಅನುದಾನ ತೆಗೆದುಕೊಂಡಿದ್ದಾರೆಯೇ ಹೊರತು, ಈ ವರೆಗೂ ಅದನ್ನು ನಿರ್ವಹಣೆ ಮಾಡಲು ನಗರಸಭೆ ಮನಸ್ಸು ಮಾಡಿಲ್ಲ ಎಂದು 14ನೇ ವಾರ್ಡ್ ನಿವಾಸಿ ಗೌತಮ್ ವಿಜಯವಾಣಿ ಜತೆ ಮಾತನಾಡಿ ಬೇಸರ ಹೊರಹಾಕಿದರು.
ನಗರಸಭೆ ನಿರ್ಲಕ್ಷ್ಯ:
ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಅಳವಡಿಸಿರುವ ಸೋಲಾರ್ ದೀಪಗಳ ನಿರ್ವಹಣೆಗೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ. ಸುಮಾರು 2 ವರ್ಷಗಳ ಹಿಂದೆ ವಾರ್ಡ್‌ಗಳಲ್ಲಿ ಅಳವಡಿಸಿದ್ದ ಸೋಲಾರ್ ಬೀದಿ ದೀಪಗಳು ಇಂದಿಗೂ ಬೆಳಕು ನೀಡಿಲ್ಲ. ನಗರಸಭೆ ಅಧಿಕಾರಿಗಳು ವಾರ್ಡ್‌ಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಕುರಿತು ಕೇಳಿದರೆ ರಿಪೇರಿ ಮಾಡಿಸಬೇಕಿದೆ ಎಂದು ಹೇಳುತ್ತಾರೆಯೇ ಹೊರತು, ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸೋಲಾರ್ ದೀಪಗಳು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಅಧಿಕಾರಿಗಳು ಒಮ್ಮೆ ಬೀದಿ ದೀಪ ಅಳವಡಿಸಿದ ಬಳಿಕ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸೋಲಾರ್ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರ ಹಣ ಪೋಲಾಗಲು ನಗರಸಭಾ ಅಧಿಕಾರಿಗಳು ಕಾರಣರಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.
ನಿರ್ವಹಣೆ ಇಲ್ಲದಿರುವುದು ಸಮಸ್ಯೆ:
ಸೋಲಾರ್ ಬೀದಿ ದೀಪದ ಮೇಲೆ ಅಳವಡಿಸುವಂತಹ ಪ್ಯಾನಲ್‌ಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ಸೋಲಾರ್ ದೀಪಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ಸೋಲಾರ್ ಪ್ಯಾನಲ್ ಮೇಲಿರುವಂತಹ ಧೂಳು ತೆಗೆಯುವುದು, ಪ್ಯಾನಲ್ ಒಳಗೆ ನೀರು ಹೋಗಿದ್ದರೆ ತೆಗೆಯುವ ಕೆಲಸ ಮಾಡಬೇಕಾಗುತ್ತದೆ. ಇದರೊಂದಿಗೆ ಸಮರ್ಪಕವಾಗಿ ಬ್ಯಾಟರಿ ಚಾರ್ಜ್ ಆಗುತ್ತಿದೆಯೇ ಎಂಬುದು ಆಗಿಂದಾಗೆ ಪರಿಶೀಲಿಸಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು ಸೋಲಾರ್ ದೀಪಗಳು ನಗರ ಪ್ರದೇಶಗಳಲ್ಲಿ ಅಗತ್ಯವಾಗಿ ಬೇಕಾಗಿದೆ. ಆಗಾಗಿ ಇದನ್ನೆಲ್ಲಾ ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ವಾರ್ಡ್ ನಿವಾಸಿಗಳು ಆಗ್ರಹಿಸಿದರು.
ಸದಸ್ಯರ ಮನೆ ಮುಂಭಾಗವೇ ಅವ್ಯವಸ್ಥೆ:
ನಗರಸಭೆಯ 13ನೇ ವಾರ್ಡ್ ಸದಸ್ಯರ ಮನೆಯ ಮುಂಭಾಗದಲ್ಲಿರುವ ಸೋಲಾರ್ ದೀಪವು ಎರಡು ವರ್ಷಗಳಿಂದ ಕೆಟ್ಟು ನಿಂತಿರುವುದು ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸುಮಾರು ಎರಡು ವರ್ಷಗಳಿಂದ ನಮ್ಮ ವಾರ್ಡ್‌ನಲ್ಲಿರುವ ಸೋಲಾರ್ ಬೀದಿ ದೀಪಗಳು ಉರಿಯುತ್ತಿಲ್ಲ. ಈ ವರೆಗೂ ರಿಪೇರಿ ಮಾಡುವವರು ಯಾರು ಬಂದಿಲ್ಲ. ವಿದ್ಯುತ್ ಕಂಬಗಳಲ್ಲಿ ಮಾತ್ರ ದೀಪಗಳು ಉರಿಯುತ್ತದೆ. ಆದರೆ ಸೋಲಾರ್ ದೀಪಗಳು ಈವರೆಗೂ ಉರಿದದ್ದು ಕಂಡಿಲ್ಲ ಎಂದು 13ನೇ ವಾರ್ಡ್ ಸದಸ್ಯರಾದ ಕಲಾವತಿಯವರು ವಿಜಯವಾಣಿ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸೋಲಾರ್ ಬೀದಿ ದೀಪಗಳ ಕಾಮಗಾರಿ ಪಡೆದಿದ್ದವರ ನಿರ್ವಹಣಾ ಅವಧಿ ಮುಗಿದಿದೆ. ಹೊಸದಾಗಿ ಎಲ್‌ಇಡಿ ಬಲ್ಪ್ ಅಳವಡಿಕೆಗೆ ಟೆಂಡರ್ ಆಗಿದೆ. ಪ್ರಕ್ರಿಯೆ ಮುಗಿದ ನಂತರ ಎಲ್ಲವನ್ನು ಸರಿಪಡಿಸಲಾಗುವುದು.-ರಾಮದಾಸ್, ಆಯುಕ್ತರು, ನಗರಸಭೆ, ಚಾಮರಾಜನಗರ. ನಮ್ಮ 14ನೇ ವಾರ್ಡ್‌ನಲ್ಲಿ ಸುಮಾರು 5-6 ಸೋಲಾರ್ ಬೀದಿ ದೀಪಗಳು ಇದೆ. 2 ವರ್ಷಗಳಿಂದ ಸೋಲಾರ್ ದೀಪಗಳು ಉರಿದದ್ದನ್ನು ಕಂಡಿಲ್ಲ. ಅದನ್ನು ಸೂಕ್ತರೀತಿಯಲ್ಲಿ ನಿರ್ವಹಣೆ ಮಾಡುವಲ್ಲಿ ನಗರಸಭೆ ವಿಲವಾಗಿದೆ.-ಗೌತಮ್, ನಿವಾಸಿ, 14ನೇ ವಾರ್ಡ್, ಚಾಮರಾಜನಗರ. ನಾನು ಇದೇ ವಾರ್ಡ್ ಸದಸ್ಯಳಾಗಿದ್ದೇನೆ. ಸುಮಾರು ಎರಡು ವರ್ಷಗಳಿಂದ ಸೋಲಾರ್ ಬೀದಿ ದೀಪಗಳು ಕೆಟ್ಟು ನಿಂತಿದೆ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ಎಲ್ಲವೂ ಹಾಳಾಗಿದೆ.-ಕಲಾವತಿ, ಸದಸ್ಯೆ, 13ನೇವಾರ್ಡ್, ಚಾಮರಾಜನಗರ.