

ಚಾಮರಾಜನಗರ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಕಾರ್ಯಕರ್ತರು ಹಾಗೂ ಮುಖಂಡರು ಇದಕ್ಕೆ ಪೂರ್ವ ತಯಾರಿ ಮಾಡಿಕೊಂಡು ಸಜ್ಜಾಗಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ದೇಶದ ಚುಕ್ಕಾಣಿಯನ್ನು ಹಿಡಿಯಲು ತಯಾರಾಗಬೇಕು ಎಂದು ತಿಳಿಸಿದರು.
ರಾಜ್ಯದ ಜನರು ವಿಧಾನಸಭೆ ಚುನಾವಣೆಯಲ್ಲಿ ಬದಲಾವಣೆ ಬಯಸಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. 5 ಗ್ಯಾರಂಟಿಗಳನ್ನು 2 ತಿಂಗಳ ಅವಧಿಯಲ್ಲಿ ಅನುಷ್ಠಾನ ಮಾಡುವ ಮೂಲಕ ಜನಪರ ಆಡಳಿತವನ್ನು ನೀಡುತ್ತಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದರು.
ಕರ್ನಾಟಕದ ಗ್ಯಾರಂಟಿ ಯೋಜನೆಗಳು ಪಂಚರಾಜ್ಯ ಚುನಾವಣೆಯಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ ಎಂದರು.
ಪಕ್ಷದ ಅಧಿಕಾರಕ್ಕೆ ಬರುವಲ್ಲಿ ಕಾರ್ಯಕರ್ತರ ಶ್ರಮ ಬಹಳ ಇದೆ. ಕಾರ್ಯಕರ್ತರ ಸಂಕಷ್ಟಗಳಿಗೂ ಸಹ ನಾವೆಲ್ಲರೂ ಸ್ಪಂದಿಸಬೇಕಾಗಿದೆ. ಈಗ ಜನ ಸಾಮಾನ್ಯರಲ್ಲಿ ಸರ್ಕಾರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ತಾವೆಲ್ಲರೂ ಕಾಂಗ್ರೆಸ್ ಜನಪರ ಯೋಜನೆಗಳನ್ನು ಮತದಾರರಿಗೆ ತಲುಪಿಸಿ, ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತದೆ. ಕಾಂಗ್ರೆಸ್ ಯುಗವನ್ನು ಆರಂಭಿಸೋಣ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಸಚಿವ ಕೃಷ್ಣಭೈರೇಗೌಡರಿಗೂ ಚಾಮರಾಜನಗರ ಜಿಲ್ಲೆಗೂ ಅವಿನಾಭವ ಸಂಬಂಧವಿದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಹಾಗೂ ಸಂಘಟನೆ ಸಭೆಗಳಿಗೆ ಕೃಷ್ಣಬೈರೇಗೌಡರಿಗೆ ಮೊದಲ ಆಹ್ವಾನ ಹೋಗುತ್ತಿತ್ತು. ಸಚಿವರು ಚಾ.ನಗರ ಎಂದಕ್ಷಣ ಮರು ಮಾತನಾಡದೇ ಜಿಲ್ಲೆಗೆ ಬರುತ್ತಿದ್ದರು. ನಮ್ಮ ನಾಯಕರಾಗಿದ್ದ ದಿ.ಆರ್. ಧ್ರುವನಾರಾಯಣ್ ಅವರಿಗೆ ಕೃಷ್ಣಭೈರೇಗೌಡ ಆತ್ಮೀಯ ಸ್ನೇಹಿತರಾಗಿದ್ದರು ಎಂದು ತಿಳಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ, ಚಿಕ್ಕಮಹದೇವ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲತಾರಾಜಶೇಕರ್ ಜತ್ತಿ, ಮಾಜಿ ಅಧ್ಯಕ್ಷ ಸದಾಶಿವಮೂರ್ತಿ, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಸಿ. ಗುರುಸ್ವಾಮಿ, ತೋಟೇಶ್, ಹೊಂಗನೂರು ಚಂದ್ರು, ಸೇವಾದಳದ ಅಧ್ಯಕ್ಷ ಜಯರಾಜ್ ಹೊಂಗನೂರು, ರವಿಗೌಡ, ಸೈಯದ್ ರಫಿ, ಸುಹೇಲ್ ಅಲಿ ಖಾನ್, ಎಎಚ್‌ಎನ್ ಖಾನ್, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ನೀಲಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರತ್ನ ಮತ್ತು ಇತರರು ಇದ್ದರು.