ಜನರ ಪಾಲಿಗೆ ನೀವೇ ‘ತ್ರಿಮೂರ್ತಿಗಳು’

21chn10
Published on

ಚಾಮರಾಜನಗರ: ಸಾರ್ವಜನಿಕರ ಪಾಲಿಗೆ ನೀವೇ ಬ್ರಹ್ಮ, ವಿಷ್ಣು, ಮಹೇಶ್ವರರು. ಸಮಸ್ಯೆಗಳ ಸೃಷ್ಟಿಕರ್ತರು, ಪಾಲಕರು, ಸಂಹಾರ ಮಾಡುವವರೂ ನೀವೆ. ನಿಮಗೆ ಬೇಡದವರ ವಿಷಯಕ್ಕೆ ನಾನ್ಯಾಕೆ ತೀರ್ಮಾನ ತೆಗೆದುಕೊಳ್ಳಲಿ ಅಂತೀರ. ನಿಮಗೆ ಬೇಕಾದವರಿಗಾಗಿ ತೀರ್ಮಾನ ತೆಗೆದುಕೊಳ್ಳುತ್ತೀರ..!

ಇದು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರದ ದೊರೆಯದ ಇರುವುದಕ್ಕೆ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ ಮಾತು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳ ಬಾಕಿ ಉಳಿದಿರುವದಕ್ಕೆ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದರು. ನಿಮಗೆ ಬೇಕಾಗಿದ್ದನ್ನು ಮಾಡೋಕೆ 10 ದಾರಿ ಹುಡುಕುತ್ತೀರ. ಬೇಡವಾದದ್ದನ್ನು ಮಾಡೋಕೆ 50 ಕಾರಣ ಹೇಳುತ್ತೀರ. ನನಗೆ ಎಲ್ಲವೂ ಗೊತ್ತಿದೆ. ಅದನ್ನೆಲ್ಲಾ ಇಲ್ಲಿ ಮಾತನಾಡಲ್ಲ. ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡದೆ ಇದ್ದರೆ ಇನ್ನೆಲ್ಲೋ ಮಾತನಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಬಗರ್‌ಹುಕಂ (ಾರಂ ನಂ.57) ಯೋಜನೆಯಡಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ರೈತರಿಗೆ 3 ತಿಂಗಳ ಒಳಗಾಗಿ ಹಕ್ಕುಪತ್ರ ವಿತರಣೆ ಮಾಡಬೇಕು. ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳು ವಿಲೇವಾರಿಯಾಗದ ಕಾರಣ ರೈತರು ಪ್ರತಿದಿನ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಎಷ್ಟೋ ಜನಕ್ಕೆ ಸರ್ಕಾರಿ ಕಚೇರಿಗೆ ಅಲೆಯುವುದೇ ಕೆಲಸವಾಗಿದೆ. ಜನರನ್ನು ಹೀಗೆ ಅಲೆಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶೀಘ್ರದಲ್ಲೇ ಬಗರ್‌ಹುಕುಂ ಸಮಿತಿ ರಚಿಸಿ ಅರ್ಜಿಗಳನ್ನು ಡಿಜಿಟಲ್ ವಿಲೇವಾರಿ ಮಾಡಿ, ಪಾರದರ್ಶಕವಾಗಿ ಕಾಲಮಿತಿ ಒಳಗೆ ಹಕ್ಕುಪತ್ರ ವಿತರಣೆ ಮಾಡಬೇಕು. ಹಿಂದಿನ ಸರ್ಕಾರ ಕಮಿಟಿ ರಚಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿತ್ತು. ಇದು ಬಡವರ ಪರವಾದ ಕೆಲಸವಾಗಿದ್ದು, ಇದರಲ್ಲಿ ಯಾವುದೇ ಪಕ್ಷ ಭೇದ ಮಾಡದೇ ಎಷ್ಟು ಅರ್ಜಿಗಳು ಬಂದಿದೆ ಎಲ್ಲವನ್ನೂ ಅನುಪಾಲನೆ ಮಾಡಿ ತಹಸೀಲ್ದಾರ್ ಜವಾಬ್ದಾರಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ವಿತರಣೆ ಮಾಡಲೇಬೇಕು ಎಂದು ತಾಕೀತು ಮಾಡಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣ ಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ಕಂದಾಯ ಇಲಾಖೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾ ಅಧಿಕಾರಿ ಸಂತೋಷ್‌ಕುಮಾರ್ ಮತ್ತು ಇತರರು ಹಾಜರಿದ್ದರು.

ಅಧಿಕಾರಿಗಳಿಗೆ ತರಾಟೆ:
ಕಂದಾಯ ಗ್ರಾಮ ರಚನೆಯಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಹಾಗೂ ನ್ಯಾಯಾಲಯದ ಕೇಸ್‌ಗಳಲ್ಲಿ ಅಸಡ್ಡೆ ತೋರುತ್ತಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಡರು. ಜಿಲ್ಲೆಯಲ್ಲಿ 67 ಕಂದಾಯ ಗ್ರಾಮಗಳನ್ನು ಗುರುತು ಮಾಡಿದ್ದು, ಈ ವರೆಗೂ ಹಕ್ಕುಪತ್ರ ವಿತರಣೆಯನ್ನು ಪೂರ್ಣಗೊಳಿಸಿಲ್ಲ. ಪ್ರಧಾನಮಂತ್ರಿ ಬಂದು ಹಕ್ಕುಪತ್ರ ಕೊಟ್ಟು ಹೋದರೂ, ಈವರೆಗೂ ಅಧಿಕೃತವಾಗಿಲ್ಲ. 4 ವರ್ಷಗಳಿಂದ ಅಧಿಕಾರಿಗಳು ಏನು ಮಾಡುತ್ತಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿರುವ ಕೇಸ್‌ಗಳಿಗೆ ಅಧಿಕಾರಿಗಳು ಭಾಗವಹಿಸಲ್ಲ, ನೋಟಿಸ್‌ಗಳನ್ನು ಸ್ವೀಕರಿಸುವುದಿಲ್ಲ. ಅಧಿಕಾರಿಗಳಿಗೆ ಇಷ್ಟೊಂದು ಬೇಜವಾಬ್ದಾರಿ ಇರಬಾರದು. ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯುತ್ತೀರಿ, ಆದರೆ ಕುಂಭಕರ್ಣನ ನಿದ್ರೆಯಲ್ಲಿ ಇದ್ದೀರಿ ಎಂದು ಅಧಿಕಾರಿಗಳನ್ನು ಜಾಡಿಸಿದರು.

ಸಾಗುವಳಿದಾರರ ಅದಾಲತ್ ಆಯೋಜಿಸಿ:
ಾರಂ ನಂ.57 ರಲ್ಲಿ ಭೂಮಿಹಕ್ಕಿಗೆ ಅರ್ಜಿಸಲ್ಲಿಸುವವರಿಗೆ ಸೂಕ್ತರೀತಿಯ ಮಾಹಿತಿ ಇರುವುದಿಲ್ಲ. ಸಾಕಷ್ಟು ಜನರು ಅವಿದ್ಯಾವಂತರಾಗಿದ್ದು, ಸರ್ಕಾರದ ದಾಖಲೆಗಳು ಇದ್ದರೂ ಅರಣ್ಯ ಇಲಅಖೆಯವರು ಟ್ರಂಚ್ ಹೊಡೆದಿದ್ದಾರೆ. ಉಳುಮೆ ಮಾಡಲು ಹೋದರೆ ತೊಂದರೆ ಕೊಡುತ್ತಾರೆ. ಆಗಾಗಿ ಕಂದಾಯ ಗ್ರಾಮ ಅದಾಲತ್ ಮಾದರಿಯಲ್ಲಿ ಸಾಗುವಳಿ ಅದಾಲತ್ ಆಯೋಜಿಸಿ. ಕೊಳ್ಳೇಗಾಲದ ಪ್ರಮುಖ ಕೆರೆಗಳು ಒತ್ತುವರಿಯಾಗಿದ್ದು, ಅಧಿಕಾರಿಗಳು ಈ ವರೆಗೂ ಕ್ರಮವಹಿಸಿಲ್ಲ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ದೂರಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ ಎಲ್ಲಿ ಅಂತಹ ಸಮಸ್ಯೆ ಇದೆ ಅಲ್ಲಿಗೆ ವಾರದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸೋಣ ಎಂದು ಹೇಳಿದರು.

ಇ ಆಫೀಸ್ ಬಳಸಿ:
ಪ್ರಗತಿ ಪರಶೀಲನೆ ಸಭೆಯ ವೇಳೆ ಈ ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಚಾಮರಾಜನಗರದಲ್ಲಿ ಎಲ್ಲ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನಗೊಳಿಸುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ಸೂಚಿಸಿದರು.
ಇ-ಆಫೀಸ್ ಅನುಷ್ಠಾನದ ನಂತರ ಜನರಿಗೆ ಯಾವೆಲ್ಲಾ ಸೇವೆಗಳು ಸುಲಭವಾಗಿ ಮತ್ತು ಶೀಘ್ರವಾಗಿ ದೊರೆಯುತ್ತಿವೆ ಮತ್ತು ಅಧಿಕಾರಿಗಳ ಕೆಲಸ ಎಷ್ಟರ ಮಟ್ಟಿಗೆ ಕಡಿಮೆಯಾಗಿದೆ? ಎಂದು ಚರ್ಚಿಸಿದರು. ಈ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬೆಳೆ ಸಮೀಕ್ಷೆ ಕುರಿತ ಎಲ್ಲ ರೈತರ ಸಂಪೂರ್ಣ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಸಹಕರಿಸಬೇಕು. ಈವರೆಗೆ 1.8 ಲಕ್ಷ ರೈತರ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಬೆಳೆ ನಷ್ಟಕ್ಕೆ ರೈತರಿಗೆ 5 ಎಕರೆ ವರೆಗೆ ಪರಿಹಾರ ಸಿಗಲಿದೆ. ಒಮ್ಮೆ ಬೆಳೆ ಸಮೀಕ್ಷೆ ಮುಗಿಸಿದ ನಂತರ ಬಿಟ್ಟುಹೋದ ರೈತರ ಹೆಸರನ್ನು ಮತ್ತೆ ಪರಿಹಾರದ ಪಟ್ಟಿಗೆ ಸೇರಿಸುವುದು ಅಸಾಧ್ಯ. ಹೀಗಾಗಿ ಅಧಿಕಾರಿಗಳು ಈಗಲೇ ಬೆಳೆ ಸಮೀಕ್ಷೆಯನ್ನು ಶೇ.100 ರಷ್ಟು ದಕ್ಷತೆಯಿಂದ ಮುಗಿಸಬೇಕು.-ಕೃಷ್ಣಭೈರೇಗೌಡ ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net