ಕಳಪೆ ದೀಪಾಲಂಕಾರ ಎಂದು ಆರೋಪಿಸಿ ಪ್ರತಿಭಟನೆ

Published on

ಚಾಮರಾಜನಗರ: ಜಿಲ್ಲಾ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಕಳಪೆ ದೀಪಾಲಂಕಾರ ಮಾಡಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದೆಂದು ಒತ್ತಾಯಿಸಿ ಯುವಸೇನೆ ಕರ್ನಾಟಕ ಸೇವಾ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿ ಮುಂಭಾಗದಲ್ಲಿ ಶನಿವಾರ ಜಮಾಯಿಸಿದ ಪ್ರತಿಭಟನಾಕಾರರು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುವಸೇನೆ ಕರ್ನಾಟಕ ಸೇವಾ ಸಂಘದ ಅಧ್ಯಕ್ಷ ನಮ್ಮನೆ ಪ್ರಶಾಂತ್ ಮಾತನಾಡಿ, ಈ ಬಾರಿಯ ಜಿಲ್ಲಾ ದಸರಾ ಮಹೋತ್ಸವದಲ್ಲಿ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ದೀಪಾಲಂಕಾರ ಮಾಡಿರುವುದಿಲ್ಲ ಮತ್ತು ತೀರ ಕಳಪೆಯಿಂದ ಕೂಡಿರುತ್ತದೆ. ಈಗಾಗಲೇ ಸಾಕಷ್ಟು ಬಲ್ಪ್‌ಗಳು ಕೆಟ್ಟು ಹೋಗಿದೆ. ಜಿಲ್ಲಾಡಳಿತ ಆವರಣದಲ್ಲೂ ಸೂಕ್ತರೀತಿಯಲ್ಲಿ ದೀಪಾಲಂಕಾರ ಮಾಡಿರಲಿಲ್ಲ. ದೀಪಾಲಂಕಾರದಲ್ಲಿ ಮೈಸೂರಿನ ಒಡೆಯರಾದ ನಾಲ್ವಡಿ ಕೃಷ್ಣರಾಜರನ್ನು ಮರೆತಿರುವುದು ಅತ್ಯಂತ ಖಂಡನೀಯ ಎಂದು ದೂರಿದರು.

ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿರುತ್ತೇವೆ. ಆದರೂ ಈ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಮುಂದಿನ ದಿನಗಳಲ್ಲಿ ಇಂತವರಿಗೆ ವಿಶೇಷ ಕಾರ್ಯಕ್ರಮದ ಟೆಂಡರ್‌ಗಳನ್ನು ನೀಡಬಾರದು. ಕೂಡಲೇ ಇವರ ಬಿಲ್‌ಗಳನ್ನು ತಡೆಯಬೇಕು. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಾರ್ಥ್, ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಮುತ್ತುರಾಜು, ಮಹದೇವು, ಮಂಜು, ಕಾರಯ್ಯ, ಆಟೋ ನಾಗೇಂದ್ರ, ಮಹದೇವ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net