ಹುತಾತ್ಮ ಪೊಲೀಸರಿಗೆ ಅರ್ಥಪೂರ್ಣ ಸ್ಮರಣೆ

21chn7
Published on

ಚಾಮರಾಜನಗರ: ದೇಶದ ವಿವಿಧ ಭಾಗಗಳಲ್ಲಿ ಹುತಾತ್ಮರಾದ ಪೊಲೀಸರಿಗೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಗಣ್ಯರಿಂದ ಅರ್ಥಪೂರ್ಣ ನಮನ ಸಲ್ಲಿಸಲಾಯಿತು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೆರೇಡ್ ಕಮಾಂಡರ್ ಮೂಲಕ ಗೌರವ ನಮನ ಸಲ್ಲಿಸಿ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಬ್ಯಾಂಡ್‌ಸೆಟ್ ತಂಡದವರು ಪೊಲೀಸ್ ಗೀತೆಯನ್ನು ನುಡಿಸಿದರು. ಬಳಿಕ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು ಸೇರಿದಂತೆ ಹಲವು ಅತಿಥಿ ಗಣ್ಯರು, ವಿಶೇಷ ಆಹ್ವಾನಿತರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇನ್ನಿತರೆ ಮುಖಂಡರು ಪುಷ್ಪಗುಚ್ಛ ಸಮರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು.

ಈ ವೇಳೆ ಮಾಧ್ಯಮದ ಜತೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗಮಾಡಿರುವ ಪೊಲೀಸ್ ಅಧಿಕಾರಿಗಳು ನಮಗೆ ಸ್ಪೂರ್ತಿಯಾಗುತ್ತಾರೆ. ಅವರ ಪರಿಶ್ರಮ ಮತ್ತು ತ್ಯಾಗದ ಮುಂದೆ ನಮ್ಮ ಸೇವೆ ಲೆಕ್ಕಕ್ಕೆಬಾರದ್ದಾಗಿದೆ. ಸಾರ್ವಜನಿಕ ಜೀವನದಲ್ಲಿರುವ ನಾವು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಹೆಮ್ಮೆ ಎನಿಸುತ್ತದೆ. ಅವರ ಸ್ಮರಣೆಯಲ್ಲಿ ನಾವೆಲ್ಲರೂ ಜನಪರ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು ಮಾತನಾಡಿ, ಕಾನೂನು ಸುವ್ಯವಸ್ಥೆಗಾಗಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರನ್ನು ಸ್ಮರಣೆ ಮಾಡಲಾಗುತ್ತಿದೆ. ರಾಜ್ಯದ 14 ಮಂದಿ ಸೇರಿದಂತೆ, ದೇಶದ ವಿವಿಧ ಭಾಗಗಳಲ್ಲಿ 149 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ತ್ಯಾಗ, ಬಲಿದಾನವನ್ನು ಸ್ಮರಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್‌ಮಿನಾ, ಕೊಳ್ಳೇಗಾಲ ಡಿಸಿಎಫ್ ಸಂತೋಷ್ ಕುಮಾರ್, ಎಸಿಎಫ್ ಸುರೇಂದ್ರ, ಡಿವೈಎಸ್ಪಿ ಲಕ್ಷ್ಮಯ್ಯ, ಸೋಮೇಗೌಡ, ರಘು ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net