ಭಜನೆ, ತಂಬೂರಿ ಕಲಾವಿದರ ಸಂಗಮ

20chn1
Published on

ಚಾಮರಾಜನಗರ: ಜಿಲ್ಲಾ ದಸರಾ ಮಹೋತ್ಸವದ ಕೊನೆಯ ದಿನವಾದ ಶುಕ್ರವಾರ ಹತ್ತಾರ ಭಜನಾ ತಂಡಗಳು, ತಂಬೂರಿ ಹಾಗೂ ಸೋಬಾನೆ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಗಮನ ಸೆಳೆದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಾ.ನಗರ ಶಾರದಾ ಭಜನಾ ಮಂಡಳಿಯ ಲಕ್ಷ್ಮೀ ತಂಡದವರು ನಡೆಸಿಕೊಟ್ಟ ಶಿವ ಭಜನೆಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಗರದ ಪ್ರಸನ್ನ ಕುಮಾರ್, ಕೊಡಸೋಗೆ ಗ್ರಾಮದ ವಾಲ್ಮೀಕಿ ಭಜನೆ ಕಲಾಸಂಘ, ಕೃಷ್ಣಪುರದ ವೆಂಕಟರಂಗಶೆಟ್ಟಿ, ಅಂಬಳೆ ರಂಗಯ್ಯ, ಕೊಡಗಾಪುರ ಕೆ.ಎಸ್.ಮಹದೇವಪ್ಪ ಹಾಗೂ ಬೊಮ್ಮಲಾಪುರದ ಗಂಗಾಧರೇಶ್ವರ ಭಜನಾ ಮಂಡಳಿ ನಡೆಸಿಕೊಟ್ಟ ಭಜನೆ ಹಾಗೂ ವಚನ ಗಾಯನ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಬಳಿಕ ಚಾ.ನಗರದ ಮಹದೇಶ್ವರ ಭಜನಾ ಮಂಡಳಿಯ ಕೃಷ್ಣಸ್ವಾಮಿ ತಂಡ, ಸಿದ್ದರಾಜು ತಂಡ, ಕಾವುದವಾಡಿ ಮಹದೇವಪ್ರಸಾದ್ ತಂಡ, ಕೆಬ್ಬೆಪುರ ಆರ್.ಸಿದ್ದರಾಜು ತಂಡ ಹಾಗೂ ಕುಂತೂರುಮೋಳೆ ದೊಡ್ಡಸ್ವಾಮಿ ತಂಡದವರು ತಂಬೂರಿ ಪದಗಳನ್ನು ಹಾಡಿದರು.
ಯಳಂದೂರು ತಾಲೂಕಿನ ಸ್ಥಳೀಯ ಸೋಬಾನೆ ಕಲಾವಿದರು ಸೋಬಾನೆ ಹಾಡಿ ನೆರೆದಿದ್ದವರನ್ನು ರಂಜಿಸಿದರು.

ಸಂಜೆಯ ನಂತರ ಮಲೆಯೂರು ಡಾ.ಎಂ.ಪಿ.ಪ್ರೀತಮ್, ಕಾವುದವಾಡಿ ಎಸ್.ರತ್ನಕುಮಾರಿ ಮತ್ತು ಎನ್.ಮಹದೇವಸ್ವಾಮಿ ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಂಗಲ ಮಹದೇವಸ್ವಾಮಿ, ಕಾಳನಹುಂಡಿ ಮಹೇಶ್, ಎಚ್.ಎಂ.ಮಹೇಶ್, ಪುರುಷೋತ್ತಮ್, ಚಂಗಚಹಳ್ಳಿ ಆರ್.ಕೃಷ್ಣಮೂರ್ತಿ ಜನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಹೆಬ್ಬಸೂರು ನಾಟ್ಯ ಬೈರವ ಕಲಾತಂಡ, ಚಾ.ನಗರದ ನಾಟ್ಯಲೋಕ ನೃತ್ಯಶಾಲೆ ಹಾಗೂ ರಾಮಸಮುದ್ರ ನಾಟ್ಯಶಿವ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net