

ಚಾಮರಾಜನಗರ: ಒಂದು ಕಡೆಯಲ್ಲಿ ಮರೆಯೋದುಂಟೆ ಮೈಸೂರು ದೊರೆಯ ಎಂಬ ಹಾಡು ಕೇಳಿಬರುತ್ತಿದ್ದರೇ, ಮತ್ತೊಂದು ಕಡೆ ಕಲಾವಿದ ತನ್ನ ಕುಂಚದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಚಿತ್ರವನ್ನು ಬಿಡಿಸಿ ಗಮನ ಸೆಳೆದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಮುಖ್ಯ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ ಕಾವ್ಯ ಕುಂಚ ಗಾಯನ ಕಾರ್ಯಕ್ರಮದಲ್ಲಿ ಸಾಕಷ್ಟು ಹಾಡುಗಳು ಮೂಡಿಬಂದರೆ, ಚಿತ್ರಕಲಾವಿದರಾದ ಮುಡಿಗುಂಡ ಮೂರ್ತಿ ಹಾಗೂ ಹರೀಶ್ ಸ್ಪಾಟ್ ಬಿಡಿಸಿದ ಚಿತ್ರಗಳು ನೋಡುಗರ ಮನದಲ್ಲಿ ಉಳಿದುಹೋದವು. ಗಾಯಕ ರವಿಕುಮಾರ್ ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆ ಸಾರುವ ಮರೆಯೋದುಂಟೆ ಮೈಸೂರು ದೊರೆಯ ಗೀತೆ ಹಾಡುತ್ತಿದ್ದರೆ, ಹರೀಶ್ ಅವರು ನಾಲ್ವಡಿಯವರ ಚಿತ್ರವನ್ನು ಕ್ಷಣಮಾತ್ರದಲ್ಲಿ ಬಿಡಿಸಿ ಗಮನಸೆಳೆದರು.
ಬುದ್ಧನ ಕುರಿತ ಗೀತೆಗೆ ಹಿರಿಯ ಚಿತ್ರಕಲಾವಿದ ಮುಡಿಗುಂಡ ಮೂರ್ತಿ ಬುದ್ಧನ ಚಿತ್ರವನ್ನು ಗೀತೆ ಮುಗಿಯುವ ಅಷ್ಟರಲ್ಲೇ ಬಿಡಿಸಿ ಪ್ರೇಕ್ಷಕರು ಉಬ್ಬೆರಿಸುವಂತೆ ಮಾಡಿದರು. ಅದಲ್ಲದೇ ಮತ್ತಷ್ಟು ಸುಮಧುರ ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಗಾಯಕ ರವಿಕುಮಾರ್ ಮತ್ತು ತಂಡದವರು ಜನರನ್ನು ರಂಜಿಸಿದರು.