

ಚಾಮರಾಜನಗರ: ಶ್ರೀ ಮಲೆ ಮಹದೇಶ್ವರನ ಕುರಿತಾದ ಜಾನಪದ ಹಾಡುಗಳಿಗೆ ಹುಚ್ಚೆದ್ದು ಕುಣಿದ ಜನರು, ಮೈನವಿರೇಳಿಸುವ ನೃತ್ಯಕ್ಕೆ ತೂರಿಬಂದ ಸಿಳ್ಳೆ ಕೇಕೆ, ಹಾಸ್ಯ ಸಂಜೆಗೆ ನಕ್ಕುನಲಿದು ಸಂಭ್ರಮಿಸಿದ ಕಲಾ ಆಸಕ್ತರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಮುಖ್ಯ ವೇದಿಕೆಯಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೂರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮ ಮೊದಲಿಗೆ ಚಾ.ನಗರದ ದೊಡ್ಡಗವಿ ಬಸಪ್ಪ ಮತ್ತು ನಿಂಗಶೆಟ್ಟಿ ತಂಡ ತಂಬೂರಿ ಪದ ಹಾಡಿದರು. ಕಟ್ನವಾಡಿ ಬಿ.ಮಹದೇವಸ್ವಾಮಿ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕದಳಿ ಮಹಿಳಾ ವೇದಿಕೆಯ ಮಹಿಳೆಯರು ನಡೆಸಿಕೊಟ್ಟ ವಚನಗಾಯನ ಹಾಗೂ ಭಜನೆ ಕಾರ್ಯಕ್ರಮ ಕೇಳುಗರನ್ನು ಭಕ್ತಿಯಲ್ಲಿ ಮುಳುಗಿಸಿತು.
ಬಿಳಿಯ ಬಾಚಹಳ್ಳಿ ಮಾದೇಶ್ ಮತ್ತು ಆಲ್ಕೆರೆ ಎಂ.ಶಿವಕುಮಾರ್ ತಂಡದವರು, ಸಿದ್ದಯ್ಯನಪುರ ಕೈಲಾಶ್ ಮೂರ್ತಿ ತಂಡ, ಗುಂಡ್ಲುಪೇಟೆ ಪುಟ್ಟರಾಜು ಮತ್ತು ತಂಡದವರು ನೀಲಗಾರರ ಪದ ಹಾಡಿದರು. ನಗರದ ಎಚ್.ಎಂ.ಶಿವಣ್ಣ, ಎಸ್.ಸುರೇಶ್, ಮಂಗಳಮ್ಮ, ಮುತ್ತುರಾಜ್ ತಂಡದವರು ಮಧುರ ಗೀತೆಗಳ ಗಾಯನ ನಡೆಸಿಕೊಟ್ಟರು. ಎನ್.ದೊರೆಸ್ವಾಮಿ, ನಾಗಮಹದೇವ್, ನಾಗೇಂದ್ರ, ರೋಹಿತ್, ಮಹದೇವಸ್ವಾಮಿ ತಂಡದವರು ಜಾನಪದ ಗೀತೆಗಳ ಗಾಯನ ನಡೆಸಿಕೊಟ್ಟರು. ನಗರದ ಹಿರಿಯ ರಂಗಕಲಾವಿದೆ ಪಂಕಜ ರವಿಶಂಕರ್ ನಡೆಸಿಕೊಟ್ಟ ದುರ್ಯೋಧನ ಏಕಪಾತ್ರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಮಾಂಬಳ್ಳಿ ಅರುಣ್ ಕುಮಾರ್ ಮತ್ತು ತಂಡದವರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಪ್ರೇಕ್ಷಕರು ತಲೆದೂಗಿದರು.