ಕಂಡಾಯದ ಕೋಳಿ ನೋಡಿದ ಡಿಸಿ, ಎಡಿಸಿ

19chn4
Published on

ಚಾಮರಾಜನಗರ: ದಸರಾ ಮಹೋತ್ಸವದ ಅಂಗವಾಗಿ ಅಭ್ಯಾಸಿ ಟ್ರಸ್ಟ್ ಕಲಾವಿದರು ಅಭಿನಯಿಸಿದ ಕಂಡಾಯದ ಕೋಳಿ ನಾಟಕವನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದಾ ಸಂಪೂರ್ಣವಾಗಿ ವೀಕ್ಷಣೆ ಮಾಡುವ ಮೂಲಕ ಕಲಾವಿದರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ನಡೆದ ಕಂಡಾಯದ ಕೋಳಿ ನಾಟಕದಲ್ಲಿ ಅಭಿನಯಿಸಿದ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಇಲ್ಲಿಯ ಜಾನಪದ ಕಲೆಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲದು. ನಾಟಕದಲ್ಲಿ ಎಲ್ಲಾ ಕಲಾವಿದರು ಬಹಳ ಅಚ್ಚುಕಟ್ಟಾಗಿ ಅಭಿನಯಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಪ್ರಸನ್ನ ಅವರು ರಚಿಸಿದ ನಾಟಕ ಎಂದು ಗೊತ್ತಾಯಿತು. ಸಾಹಿತ್ಯ ಆಸಕ್ತ ಅಧಿಕಾರಿ ವರ್ಗ ಇದೆ ಎಂಬುದೇ ಖುಷಿ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಗಳು ಇದ್ದು, ಅಂತವರನ್ನು ಹೊರಗಚ್ಚಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಸಾಹಿತಿ ಮಂಜುಕೋಡಿ ಉಗನೆ, ವಕೀಲ ಮಹಾಲಿಂಗಗಿರ್ಗಿ, ನಿರ್ದೇಶಕ ಕಿರಣ್‌ಗಿರ್ಗಿ, ರವಿತೇಜ ಹಾಗೂ ಇತರರು ಹಾಜರಿದ್ದರು.

ನಾಟಕಕ್ಕೆ ಉತ್ತಮ ಸ್ಪಂದನೆ:
ನಗರದ ಅಭ್ಯಾಸಿ ಟ್ರಸ್ಟ್ ಕಲಾವಿದರು ಅಭಿನಯಿಸಿದ ಕಂಡಾಯದಕೋಳಿ ನಾಟಕಕ್ಕೆ ರಂಗಾಸಕ್ತರಿಂದ ಉತ್ತಮ ಸ್ಪಂದನೆ ದೊರೆಯಿತು. ಕಲಾವಿದರಾದ ರಾಮಣ್ಣ, ಕಿರಣ್‌ಗಿರ್ಗಿ, ಕಲೆನಟರಾಜ್, ರವಿತೇಜ ಹಾಗೂ ಇನ್ನಿತರೆ ಕಲಾವಿದರು ಅಭಿನಯ ನೋಡುಗರ ಗಮನಸೆಳೆಯಿತು. ಗ್ರಾಮೀಣ ಭಾಷೆಯ ಸೊಗಡು ಹಾಗೂ ಮಂಟೇಸ್ವಾಮಿ ಸಾಂಸ್ಕೃತಿಕ ಪರಂಪರೆಯ ಸತ್ವವನ್ನು ನಾಟಕವು ಕಟ್ಟಿಕೊಟ್ಟಿತು. ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಸರಿ ಇಲ್ಲದೆಯೂ ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ಅಭ್ಯಾಸಿ ತಂಡ ಯಶಸ್ವಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net